ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಡದಿಯಲ್ಲಿ ರೈತರು ನಡೆಸುತ್ತಿರುವ ನ್ಯಾಯಸಮ್ಮತ ಹೋರಾಟವನ್ನು ದಮನ ಮಾಡಲು ಪ್ರತಿಭಟನಾಕಾರರ ಮೇಲೆ ಸುಳ್ಳು ಎಫ್‌ಐಆರ್ ದಾಖಲಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ನಾವು ಯಾವುದೇ ಕಾರಣಕ್ಕೂ ರೈತರನ್ನು ಕೈಬಿಡುವುದಿಲ್ಲ, ಅವರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ನಾನು ಸಿಎಂ ಆಗಿದ್ದಾಗ ಕೇಂದ್ರದ ಮುಂದೆ ಕೈಚಾಚಲಿಲ್ಲ
ಪ್ರಸ್ತುತ ಬರಗಾಲದ ಸಂದರ್ಭದಲ್ಲಿ ರೈತರಿಗೆ ಕೇವಲ ಎರಡೂವರೆ ಸಾವಿರ ರೂ. ಅಲ್ಪ ಮೊತ್ತದ ಸಬ್ಸಿಡಿ ನೀಡಿ, ಉಳಿದ ಹಣಕ್ಕಾಗಿ ಕೇಂದ್ರದ ಕಡೆಗೆ ಬೆರಳು ತೋರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಹೆಚ್‌ಡಿಕೆ ಟೀಕಿಸಿದರು. ʼನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಇಂತಹ ಪರಿಸ್ಥಿತಿಯಲ್ಲಿ ಎಂದಿಗೂ ಕೇಂದ್ರದ ಮುಂದೆ ಕೈಚಾಚಲಿಲ್ಲʼ ಎಂದಿದ್ದಾರೆ.
ಸಾಲಮನ್ನಾ ಕ್ರೆಡಿಟ್ ವಾರ್
ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ದು ನಮ್ಮ ಬೆಂಬಲದಿಂದಲೇ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಅವರು, ನಾನು ಈ ಪಾಪಿಗಳ ಜೊತೆ ಮೈತ್ರಿ ಮಾಡಿಕೊಂಡಿದ್ದೇ ರೈತರಿಗೆ ನೆರವಾಗಲು. ನನ್ನ 14 ತಿಂಗಳ ಆಡಳಿತಾವಧಿಯಲ್ಲಿ ಮೈಕ್ರೋ ಫೈನಾನ್ಸ್ ಪೀಡೆಯಿಂದ ರೈತರನ್ನು ರಕ್ಷಿಸಲು ಕಬ್ಬು ಬೆಳೆಗಾರರ 2.5 ಸಾವಿರ ಕೋಟಿ ರೂ. ಸೇರಿದಂತೆ ಬೃಹತ್ ಮೊತ್ತದ ಸಾಲಮನ್ನಾ ಮಾಡಿದ್ದೆ. ಆಗಲೇ 28 ಸಾವಿರ ರೂ.ಗಳವರೆಗೆ ಪರಿಹಾರ ಒದಗಿಸಿದ್ದೆ ಎಂದು ನೆನಪಿಸಿಕೊಂಡರು.
ಸರ್ವಪಕ್ಷ ನಿಯೋಗದ ನಿರ್ಧಾರಕ್ಕೆ ಟೀಕೆ
ಬರ ಪರಿಹಾರಕ್ಕಾಗಿ ದೆಹಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಮುಂದಾಗಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಿರ್ಧಾರವನ್ನು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ವಿಶೇಷ ವಿಮಾನಗಳು, ಫೈವ್ ಸ್ಟಾರ್ ಹೋಟೆಲ್ ವಾಸ್ತವ್ಯದ ಮೂಲಕ ಸಾರ್ವಜನಿಕರ ಹಣ ಪೋಲು ಮಾಡುವ ಬದಲು, ನೀವೇ ಖುದ್ದಾಗಿ ಹೋಗಿ ಮಾತನಾಡಿ ಬರಲು ಸಾಧ್ಯವಿಲ್ಲವೇ? ರಾಜ್ಯದ ಖಜಾನೆಯನ್ನು ನಾವೇನು ಖಾಲಿ ಮಾಡಿಲ್ಲ, ಅದನ್ನು ಲೂಟಿ ಹೊಡೆದು ಖಾಲಿ ಮಾಡಿಕೊಂಡು ಕುಳಿತಿರುವವರು ನೀವೇ ಎಂದು ಗುಡುಗಿದ್ದಾರೆ. ಯಾವ ಭಾಗದಲ್ಲಿ ರೈತರಿಗೆ ಎಷ್ಟು ನಷ್ಟವಾಗಿದೆ ಎಂಬುದನ್ನು ವೈಜ್ಞಾನಿಕವಾಗಿ ಪರಾಮರ್ಶಿಸಿ ತಕ್ಷಣವೇ ಸೂಕ್ತ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:
ʼ50 ಸಾವಿರ ಜನರನ್ನು ಸೇರಿಸಿ ಸನ್ಮಾನಿಸುವೆʼ
ಪ್ರತಿಯೊಂದು ಅಭಿವೃದ್ಧಿ ವಿಚಾರಕ್ಕೂ ಕುಮಾರಸ್ವಾಮಿ ಅಡ್ಡಗಾಲು ಹಾಕುತ್ತಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಕೌಂಟರ್ ಕೊಟ್ಟ ಹೆಚ್‌ಡಿಕೆ, ನೀವು ನಿಜವಾಗಿಯೂ ಜನರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವುದಾದರೆ ಇನ್ನು 10 ವರ್ಷ ಅಧಿಕಾರದಲ್ಲಿ ಇರಿ. ನಾನೇ ಖುದ್ದಾಗಿ 50 ಸಾವಿರ ಜನರನ್ನು ಸೇರಿಸಿ ನಿಮಗೆ ಅದ್ಧೂರಿ ಸನ್ಮಾನ ಮಾಡುತ್ತೇನೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿ ಹೊಡೆಯಲು ಮುಂದಾದರೆ ನಾನು ಖಂಡಿತವಾಗಿಯೂ ಅಡ್ಡಗಾಲು ಹಾಕಿಯೇ ತೀರುತ್ತೇನೆ ಎಂದು ಸವಾಲು ಹಾಕಿದ್ದಾರೆ.



