ಸುಲಿಗೆ ಪ್ರಕರಣ: ಕುಖ್ಯಾತ ಆರೋಪಿ ಶರಣ್ ಆಕಾಶಭವನ ಸೇರಿದಂತೆ ಐವರು ಸೆರೆ

ಹೊಸದಿಗಂತ ವರದಿ, ಮಂಗಳೂರು:

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ದರೋಡೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿ 2 ತಿಂಗಳ ಹಿಂದೆ ಜೈಲ್ ನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಶರಣ್ ಆಕಾಶಭವನ ಯಾನೆ ರೋಹಿದಾಸ್(38) ಹಾಗೂ ಆತನ ಸಹಚರರಾದ ಕಂಕನಾಡಿ ನಿವಾಸಿ ಅನಿಲ್ ಕುಮಾರ್ ಸಾಲ್ಯಾನ್ ಯಾನೆ ಅನಿಲ್ ಪಂಪ್ ವೆಲ್(40),
ಬಜ್ಪೆ ನಿವಾಸಿ ಸೈನಾಲ್ ಡಿ ಸೋಜಾ(22), ಫರಂಗಿಪೇಟೆಯ ಪ್ರಸಾದ್(39), ಜೆಪ್ಪಿನಮೊಗರು ನಿವಾಸಿ ಚೇತನ್ ಕೊಟ್ಟಾರಿ(35) ಬಂಧಿತರು.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರು ನಂದಿನಿ ಬ್ರಿಡ್ಜ್ ಬಳಿ 2021ರ ಡಿ.8 ರಂದು ರಾತ್ರಿ ಸುಮಾರು 11-30ರ ಸುಮಾರಿಗೆ ಹಳೆಯಂಗಡಿ ನಿವಾಸಿಯೊಬ್ಬರು ತನ್ನ ದ್ವಿ ಚಕ್ರ ವಾಹನದಲ್ಲಿ ಚೇಳಾರು ನಂದಿನಿ ಬ್ರಿಡ್ಜ್ ಬಳಿ ಹೋಗುತ್ತಿದ್ದ ಸಮಯ ಆರೋಪಿಗಳು ಕಾರಿನಲ್ಲಿ ಹಿಂಬಾಲಿಸಿ ತಡೆದು ಚಾಕು ತೋರಿಸಿ ಬೆದರಿಸಿ ಅವರಿಂದ ಮೊಬೈಲ್ ಫೋನ್, ರೂ. 3000 ನಗದು, ಹಾಗೂ ದ್ವಿಚಕ್ರವನ್ನು ಸುಲಿಗೆ ಮಾಡಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಸಮಯ ಈ ಪ್ರಕರಣದಲ್ಲಿ ಭಾಗಿಯಾದ
ರೋಹಿದಾಸ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಲಿಗೆ ಪ್ರಕರಣದ ಬಗ್ಗೆ ಬಾಯ್ಬಿಟ್ಟಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!