ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೆಟ್ರೋಲ್ ಟ್ಯಾಂಕರ್ ಟ್ರಕ್‌ಗೆ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ಗುರುವಾರ ರಾತ್ರಿ ನಡೆದಿದೆ.
ತಿರುಪ್ಪುರ ಜಿಲ್ಲೆಯ ಧಾರಾಪುರಂ-ಪಳನಿ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.
ತಮಿಳುಮಣಿ (51), ಚಿತ್ರಾ (49), ಸೆಲ್ವರಾಣಿ (70), ಬಾಲಕೃಷ್ಣನ್ (78) ಮತ್ತು ಕಲಾರಾಣಿ (50) ಮೃತ ದುರ್ದೈವಿಗಳು.
ಮೃತರು ಮದುವೆ ಕಾರ್ಯಕ್ರಮವನ್ನು ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.
ಇದರಿಂದಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುಮಣಿ, ಚಿತ್ರಾ, ಬಾಲಕೃಷ್ಣನ್ ಮತ್ತು ಸೆಲ್ವರಾಣಿ ಸ್ಥಳದಲ್ಲೇ ಮೃತಪಟ್ಟಿದ್ದು, ಕಲಾರಾಣಿ ಅವರನ್ನು ಧಾರಾಪುರಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಪಡೆಯುವ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಅಪಘಾತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.