ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ರ ಕಾರ್ಗೋ ಪ್ರದೇಶದಲ್ಲಿ ಫ್ಲೋರಿನ್ ಸೋರಿಕೆಯಾಗಿದೆ ಎಂದು ಶನಿವಾರ (ಆಗಸ್ಟ್ 17) ವರದಿಯಾಗಿದೆ. ಈ ಘಟನೆಯಲ್ಲಿ ವಿಮಾನ ನಿಲ್ದಾಣದ ನೌಕರರು ಪ್ರಜ್ಞಾಹೀನರಾಗಿದ್ದಾರೆ ಎಂದು ಹೇಳಲಾಗುತ್ತಿದೆ
ಇದೀಗ ಪ್ರಸ್ತುತ ಪ್ರದೇಶ ಸುರಕ್ಷಿತವಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಟರ್ಮಿನಲ್ 3 ರ ಕಾರ್ಗೋ ಪ್ರದೇಶದಲ್ಲಿ ಫ್ಲೋರಿನ್ ಸೋರಿಕೆ ವರದಿಯಾದ ನಂತರ ಲಕ್ನೋ ವಿಮಾನ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಆತಂಕ ಸೃಷ್ಟಿಯಾಗಿತ್ತು. ಸೋರಿಕೆ ನಡೆದಾಗ ವಿಕಿರಣಶೀಲ ವಸ್ತುಗಳ ಎಚ್ಚರಿಕೆ ಮೊಳಗಿತ್ತು. ಎಚ್ಚರಿಕೆಯ ಕಾರಣ ಕಂಡುಹಿಡಿಯಲು ಅಧಿಕಾರಿಗಳು NDRF ಗೆ ಕರೆ ಮಾಡಿದ್ದರು.
ವಿಮಾನ ನಿಲ್ದಾಣದ ಕಾರ್ಗೋ ಪ್ರದೇಶದಿಂದ ಎಲ್ಲ ಜನರನ್ನು ದೂರವಿರಿಸಲು ಸೂಚನೆಗಳನ್ನು ನೀಡಲಾಗಿದೆ. ವಿಮಾನ ನಿಲ್ದಾಣದ ಒಳಗಿನ 1.5 ಕಿಲೋಮೀಟರ್ ಪ್ರದೇಶವನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಕ್ಯಾನ್ಸರ್ ರೋಗಿಗಳಿಗೆ ಔಷಧಿಗಳನ್ನು ಹೊಂದಿರುವ ಪಾರ್ಸೆಲ್ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಪ್ರದೇಶದಲ್ಲಿ ವಿಕಿರಣಶೀಲ ವಸ್ತುಗಳ ಎಚ್ಚರಿಕೆಯನ್ನು ಸಕ್ರಿಯಗೊಳಿಸಿದೆ ಎಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ವಿಮಾನ ನಿಲ್ದಾಣದ ಅಗ್ನಿಶಾಮಕ ಸೇವೆಯನ್ನು ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ನಿರ್ವಹಿಸಲು ನಿಯೋಜಿಸಲಾಗಿದೆ.ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿ ಹೇಳಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಸುಗಮವಾಗಿ ನಡೆಯುತ್ತಿವೆ ಎಂದಿದ್ದಾರೆ.