ಆಹಾರ ಸುರಕ್ಷತಾ ರ‍್ಯಾಂಕಿಂಗ್: ಕೇರಳ ಮತ್ತೆ ಟಾಪ್, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇಂದು ಆಹಾರ ಸುರಕ್ಷತಾ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ (ಎಸ್‌ಎಫ್‌ಎಸ್‌ಐ) 2024ರಲ್ಲಿ ಕೇರಳ ಸತತ ಎರಡನೇ ಬಾರಿಗೆ ಅಗ್ರಸ್ಥಾನದಲ್ಲಿದೆ. ಕಳೆದ ವರ್ಷ ಮೂರನೇ ಸ್ಥಾನಕ್ಕೆ ಕುಸಿದಿದ್ದ ತಮಿಳುನಾಡು ಈ ಬಾರಿ ಎರಡನೇ ಸ್ಥಾನ ಪಡೆದುಕೊಂಡಿದೆ. 2022ರಲ್ಲಿ ತಮಿಳುನಾಡು ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದ್ದರೆ ಕೇರಳ ಎರಡನೇ ಸ್ಥಾನದಲ್ಲಿತ್ತು. 2019ರಿಂದ ವಾರ್ಷಿಕವಾಗಿ ಬಿಡುಗಡೆಯಾಗುತ್ತಿರುವ ಸೂಚ್ಯಂಕದಲ್ಲಿ ಈ ಬಾರಿ ಜಮ್ಮು ಮತ್ತು ಕಾಶ್ಮೀರವು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಆಹಾರ ಸುರಕ್ಷತಾ ಶ್ರೇಯಾಂಕದಲ್ಲಿ ಕರ್ನಾಟಕ ಕಳೆದ ವರ್ಷ 9ನೇ ಸ್ಥಾನದಲ್ಲಿತ್ತು. ಈ ಬಾರಿಯೂ ಅದೇ ಸ್ಥಾನದಲ್ಲೇ ಮುಂದೂವರೆದಿದೆ ಎನ್ನಲಾಗಿದೆ.

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಆಯೋಜಿಸುತ್ತಿರುವ ವರ್ಲ್ಡ್ ಫುಡ್ ಇಂಡಿಯಾ 2024 ಕಾರ್ಯಕ್ರಮದ ಜೊತೆಗೆ FSSAI ಆಯೋಜಿಸಿದ ಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆ (GFRS) 2024ರ ಎರಡನೇ ಆವೃತ್ತಿಯಲ್ಲಿ ಕೇಂದ್ರ ಆರೋಗ್ಯ ಸಚಿವ J P ನಡ್ಡಾ ಬಿಡುಗಡೆ ಮಾಡಿದ ಸೂಚ್ಯಂಕದಲ್ಲಿ ಗುಜರಾತ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

2021ರಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕೇರಳ ಮತ್ತು ತಮಿಳುನಾಡು ಎರಡು ಮತ್ತು ಮೂರನೇ ಸ್ಥಾನದಲ್ಲಿತ್ತು.

ಸೂಚ್ಯಂಕವು ಐದು ನಿಯತಾಂಕಗಳ ಮೇಲೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ನಿರ್ಣಯಿಸುತ್ತದೆ. ಮಾನವ ಸಂಪನ್ಮೂಲಗಳು ಮತ್ತು ಸಾಂಸ್ಥಿಕ ಡೇಟಾ, ಅನುಸರಣೆ, ಆಹಾರ ಪರೀಕ್ಷೆ-ಮೂಲಸೌಕರ್ಯ ಮತ್ತು ಕಣ್ಗಾವಲು, ತರಬೇತಿ ಮತ್ತು ಸಾಮರ್ಥ್ಯ ವರ್ಧನೆ, ಮತ್ತು ಗ್ರಾಹಕರ ಸಬಲೀಕರಣ ಸೇರಿದೆ.

2018-19ರಲ್ಲಿ ಪ್ರಾರಂಭವಾದ ಸೂಚ್ಯಂಕವು ದೇಶದಲ್ಲಿನ ಆಹಾರ ಸುರಕ್ಷತೆ ಪರಿಸರ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕ ಮತ್ತು ಧನಾತ್ಮಕ ಬದಲಾವಣೆಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ನಾಗರಿಕರಿಗೆ ಸುರಕ್ಷಿತ ಆಹಾರವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!