ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಪ್ರಸಾದ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನಂಶವಿದೆ ಎಂದು ತಪ್ಪೋಪಿಕೊಂಡಿದ್ದು, ಆದ್ರೆ ದೇವಸ್ಥಾನಕ್ಕೆ ತುಪ್ಪ ಪೂರೈಸುತ್ತಿರುವ ದಿಂಡುಗಲ್‌ನ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಶುಕ್ರವಾರ ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದೆ.
ದಿಂಡುಗಲ್‌ನ ಎಆರ್ ಡೈರಿ ಫುಡ್ ಕಂಪನಿಯಿಂದ ತಿರುಪತಿ ದೇವಸ್ಥಾನಕ್ಕೆ ರವಾನೆಯಾಗುವ ತುಪ್ಪ ಉತ್ತಮ ಗುಣಮಟ್ಟದ್ದಾಗಿದೆ ಎಂದು ಗುಣಮಟ್ಟ ನಿಯಂತ್ರಣಾಧಿಕಾರಿಗಳಾದ ಲೆನಿ ಮತ್ತು ಕಣ್ಣನ್ ಸ್ಪಷ್ಟಪಡಿಸಿದ್ದಾರೆ.
ತಿರುಪತಿ ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿದ ಅವರು, ತಮಿಳುನಾಡಿನ ಪರವಾಗಿ ತುಪ್ಪ ಕಳುಹಿಸಿರುವ ಎಆರ್ ಡೈರಿ ಫುಡ್ ಕಂಪನಿಯ ತುಪ್ಪದಲ್ಲಿ ಯಾವುದೇ ಲೋಪವಿಲ್ಲ. ನಾವು ಜೂನ್‌ನಿಂದ ಜುಲೈವರೆಗೆ ತಿರುಮಲ ತಿರುಪತಿ ದೇವಸ್ಥಾನಗಳಿಗೆ ತುಪ್ಪವನ್ನು ಪೂರೈಸುತ್ತಿದ್ದೇವೆ. ಆದರೆ, ಸದ್ಯ ದೇವಾಸ್ಥಾನಕ್ಕೆ ತುಪ್ಪ ಪೂರೈಕೆಯಾಗುತ್ತಿಲ್ಲ. ಈಗ ನಮ್ಮ ಕಂಪನಿಯ ಉತ್ಪನ್ನದಲ್ಲಿ ದೋಷವಿದೆ ಎಂದು ಹೇಳಲಾಗುತ್ತಿದೆ. ಕಳೆದ 25 ವರ್ಷಗಳಿಂದ ತುಪ್ಪ ಉತ್ಪಾದನೆ ಮಾಡುವ ಉದ್ಯಮದಲ್ಲಿದ್ದೇವೆ. ಇಲ್ಲಿಯವರೆಗೆ ಯಾವುದೇ ದೂರುಗಳು ಕೇಳಿ ಬಂದಿಲ್ಲ ಎಂದರು.
ನಮ್ಮ ಕಂಪನಿಯ ಉತ್ಪಾದನೆಯ ಶೇ. 0.5 ರಷ್ಟು ಮಾತ್ರ ತಿರುಪತಿ ದೇವಸ್ಥಾನಕ್ಕೆ ಕಳುಹಿಸುತ್ತಿದ್ದೆವು. ದೇವಸ್ಥಾನ ಅಷ್ಟೇ ಅಲ್ಲದೇ ಎಲ್ಲ ಕಡೆಯೂ ನಮ್ಮ ಕಂಪನಿಯ ತುಪ್ಪ ಸಿಗುತ್ತದೆ. ಅನೇಕ ಸ್ಥಳಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಅಲ್ಲಿಗೆ ಹೋಗಿ ಅವುಗಳ ಗುಣಮಟ್ಟ ಪರೀಕ್ಷಿಸಬಹುದು. ತುಪ್ಪದ ಗುಣಮಟ್ಟದಲ್ಲಿ ದೋಷ ಕಂಡು ಬಂದಲ್ಲಿ ಹೇಳಬಹುದು. ಆಹಾರ ಸುರಕ್ಷತಾ ಇಲಾಖೆಯಿಂದ ಮಾದರಿ ಸಂಗ್ರಹಿಸಲಾಗಿದ್ದು, ಈಗಾಗಲೇ ತಿರುಪತಿ ದೇವಸ್ಥಾನದ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಪರೀಕ್ಷೆ ಸಹ ನಡೆಸಲಾಗಿದೆ. ಜೂನ್ ಮತ್ತು ಜುಲೈನಲ್ಲಿ ಕಳುಹಿಸಲಾದ ತುಪ್ಪದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂಬ ವರದಿ ಇದೆ. ಆದರೂ ವದಂತಿ ಹಬ್ಬಿಸಲಾಗುತ್ತಿದೆ. ಒಪ್ಪಂದದ ಪ್ರಕಾರ ಲಡ್ಡು ತಯಾರಿಕೆಗೆ ಮಾತ್ರ ತುಪ್ಪ ಕಳುಹಿಸಲಾಗಿದೆ. ತಿರುಪತಿ ದೇವಸ್ಥಾನಕ್ಕೆ ತುಪ್ಪ ಕಳಿಸಿದವರು ಬಹಳ ಮಂದಿ ಇದ್ದಾರೆ. ತಿರುಪತಿ ದೇವಸ್ಥಾನಕ್ಕೆ ಕಳುಹಿಸುವ ಮೊದಲು ತುಪ್ಪವನ್ನೂ ಪರೀಕ್ಷಿಸಲಾಗುತ್ತದೆ. ಅವರು ಹೇಳಿದ ನಂತರವೂ ಮರು ಪರಿಶೀಲನೆ ನಡೆಸಿದ್ದೇವೆ. ನಮ್ಮ ಕಂಪನಿಯ ತುಪ್ಪ ಶುದ್ಧವಾಗಿದೆ. ನಮ್ಮ ಬಳಿ ಸರಿಯಾದ ಪುರಾವೆಗಳಿವೆ. ದೇವಸ್ಥಾನ ಕೂಡ ಪರಿಶೀಲನೆ ನಡೆಸಿದ್ದು, ಯಾವುದೇ ಲೋಪದೋಷ ಕಂಡುಬಂದಿಲ್ಲ. ಆಹಾರ ಸುರಕ್ಷತಾ ಇಲಾಖೆ ಮತ್ತು ಐಎಸ್‌ಐ ಆಗ್ಮಾರ್ಕ್ನ ಅಧಿಕಾರಿಗಳು ಕೂಡ ಮಾದರಿಗಳನ್ನು ತೆಗೆದುಕೊಂಡು ಅವುಗಳನ್ನು ವಿಶ್ಲೇಷಿಸಿದ್ದಾರೆ. ಮೇಲಾಗಿ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಲೆನಿ ಮತ್ತು ಕಣ್ಣನ್ ಸ್ಪಷ್ಟಪಡಿಸಿದ್ದಾರೆ.