ಐದು ಜನಕ್ಕೆ ಭಾರತಕ್ಕೆ ಭೇಟಿ ನೀಡುವಂತೆ ಸ್ಫೂರ್ತಿ ತುಂಬಿ: ಡೆನ್ಮಾರ್ಕ್​​​ನ ಭಾರತೀಯರಿಗೆ ಪ್ರಧಾನಿ ಮೋದಿ ಕರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯೂರೋಪ್​ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಡೆನ್ಮಾರ್ಕ್​ ರಾಜಧಾನಿ ಕೋಪನ್ ಹ್ಯಾಗನ್​ನಲ್ಲಿ ಭಾರತೀಯರ ಸಂವಾದ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಒಳಗೊಳ್ಳುವಿಕೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯು ಭಾರತೀಯ ಸಮುದಾಯದ ಶಕ್ತಿಯಾಗಿದೆ. ಭಾಷೆ ಯಾವುದೇ ಇರಲಿ ನಮ್ಮ ಸಂಸ್ಕೃತಿ ಭಾರತೀಯ. ನಾವು ‘ವಸುದೈವ ಕುಟುಂಬಕಂ’ ಅನ್ನು ನಂಬುತ್ತೇವೆ ಎಂದು ಹೇಳಿದರು.

ಕನಿಷ್ಠ ಐದು ಜನಕ್ಕೆ ಭಾರತಕ್ಕೆ ಭೇಟಿ ನೀಡುವಂತೆ ಸ್ಪೂರ್ತಿ ತುಂಬಿ, ಚಲೋ ಇಂಡಿಯಾ ಘೋಷಣೆ ಮೂಲಕ ಅಲ್ಲಿನ ಜನರಿಗೆ ಸ್ಪೂರ್ತಿ ತುಂಬಿ ಎಂದು ಕರೆ ನೀಡಿದರು.

ಭಾರತದ ಪ್ರತಿಯೊಂದು ಕುಟುಂಬಕ್ಕೂ ಲಸಿಕೆಯನ್ನು ನೀಡಲು ಸಾಧ್ಯವಾಗದಿದ್ದರೆ, ಪ್ರಪಂಚದ ಮೇಲೆ ಅದರ ಪರಿಣಾಮ ಏನಾಗುತ್ತಿತ್ತು ಎಂಬುದನ್ನು ಒಮ್ಮೆ ಊಹಿಸಿ. ಮೇಡ್​ ಇನ್​ ಇಂಡಿಯಾ ಮತ್ತು ಪರಿಣಾಮಕಾರಿ ಲಸಿಕೆಗಳ ಮೇಲೆ ಭಾರತ ಕೆಲಸ ಮಾಡದೇ ಹೋಗಿದ್ದರೆ ಅಥವಾ ದೊಡ್ಡ ಪ್ರಮಾಣದ ಲಸಿಕಾ ಉತ್ಪಾದನೆಯನ್ನು ಹೊಂದಿಲ್ಲದಿದ್ದರೆ, ಹಲವಾರು ದೇಶಗಳಲ್ಲಿ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸಿ ಎನ್ನುವ ಮೂಲಕ ಕೊರೋನಾ ವಿರುದ್ಧ ಹೋರಾಡುವಲ್ಲಿ ಭಾರತದ ಜಾಗತಿಕ ಕೊಡುಗೆಯನ್ನು ಪ್ರಧಾನಿ ಮೋದಿ ಸ್ಮರಿಸಿದರು.

ನಾನು ಜೀವನ ಅಥವಾ ಪರಿಸರಕ್ಕಾಗಿ ಜೀವನ ಶೈಲಿಯ ಬಗ್ಗೆ ಮಾತನಾಡುತ್ತೇನೆ. ನಾವು ಬಳಕೆ-ಆಧಾರಿತ ವಿಧಾನವನ್ನು ತ್ಯಜಿಸಬೇಕಾಗಿದೆ. ಬಳಕೆ ಮತ್ತು ತ್ಯಜಿಸುವಿಕೆಯು ನಮ್ಮ ಗ್ರಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಮ್ಮ ಬಳಕೆಯನ್ನು ನಮ್ಮ ಅಗತ್ಯಗಳಿಂದ ನಿರ್ಧರಿಸಬೇಕೆ ಹೊರತು ನಮ್ಮ ಜೇಬಿನ ಗಾತ್ರದಿಂದಲ್ಲ ಎಂದು ಸಲಹೆ ನೀಡಿದರು.

ಭಾರತ ಬಡತನದ ವಿರುದ್ಧ ಹೋರಾಡುತ್ತಿದೆ, ಅದನ್ನು ಹೋಗಲಾಡಿಸುವತ್ತ ಹೆಜ್ಜೆ ಇಟ್ಟಿದೆ. ವಿಶ್ವದಲ್ಲಿ ಈಗ ಬಡತನ ಕಡಿಮೆ ಆಗುತ್ತಿದೆ ಎಂದ ಮೋದಿ, ಭಾರತ ಬಡತನವನ್ನು ಹೋಗಲಾಡಿಸಲು ಹಲವು ಮೂಲ ಸೌಕರ್ಯಗಳನ್ನ ಒದಗಿಸಿದೆ. ಎಲ್ಲರಿಗೂ ವಸತಿ, ಶೌಚಾಲಯ, ಕುಡಿವ ನೀರು, ಉಚಿತ ಆರೋಗ್ಯ ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ನೀಡಲು ಯೋಜನೆ ರೂಪಿಸಿದೆ ಎಂದು ಪ್ರತಿಪಾದಿಸಿದರು.

ಹಲವಾರು ದೊಡ್ಡ ರಾಷ್ಟ್ರಗಳು ಬಳಸುವ ಸಂಯೋಜಿತ ಡೇಟಾಕ್ಕಿಂತ ಹೆಚ್ಚು ಮೊಬೈಲ್ ಡೇಟಾವನ್ನು ಭಾರತವು ಬಳಸುತ್ತದೆ. ಹೊಸ ಬಳಕೆದಾರರು ಕೇವಲ ನಗರ ವಾಸಿಗಳಲ್ಲ, ದೂರದ ಹಳ್ಳಿಯವರಾಗಿದ್ದಾರೆ. ಡೇಟಾವೂ ಭಾರತದ ಹಳ್ಳಿಗಳು ಮತ್ತು ಬಡವರನ್ನು ಸಶಕ್ತಗೊಳಿಸಿರುವುದು ಮಾತ್ರವಲ್ಲದೆ ಪ್ರಮುಖ ಡಿಜಿಟಲ್ ಮಾರುಕಟ್ಟೆಗೆ ಬಾಗಿಲು ತೆರೆದಿದ್ದು, ಇದು ನವ ಭಾರತದ ನೈಜ ಕಥೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!