ಹೊಸದಿಗಂತ ವರದಿ, ಮಂಗಳೂರು
ಮಂಗಳೂರು ನಗರದ ಪಾಂಡೇಶ್ವರದಲ್ಲಿ ಇರುವ ಪ್ರಧಾನ ಅಂಚೆ ಕಚೇರಿಯ ಫಿಲಾಟೆಲಿಕ್ ಬ್ಯೂರೋ ಇದೀಗ ಪ್ರವಾಸಿಗರ ನೆಚ್ಚಿನ ತಾಣವಾಗುತ್ತಿದೆ. ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಇದನ್ನು ಅಧಿಕೃತ ಪ್ರವಾಸಿ ತಾಣಗಳ ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ಮುಂದಾಗಿದೆ.
ವಿವಿಧ ರೀತಿಯ ಸಂಸ್ಮರಣಾ ಅಂಚೆ ಚೀಟಿಗಳು, ವಿಶೇಷ ಅಂಚೆ ಲಕೋಟೆಗಳು, ಸಚಿತ್ರ ಅಂಚೆ ಕಾರ್ಡುಗಳು ಇಲ್ಲಿ ಲಭ್ಯವಿದ್ದು ಮಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ಫಿಲಾಟೆಲಿಕ್ ಬ್ಯೂರೋಗೆ ಭೇಟಿ ನೀಡಿ ಅಂಚೆ ಚೀಟಿ ಹಾಗೂ ಇತರ ಅಂಚೆ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ. ಇದೀಗ ನ್ಯೂಜಿಲ್ಯಾಂಡ್, ಕೆನಡಾ ಮುಂತಾದ ದೇಶಗಳ ಪ್ರವಾಸಿಗರು ‘ಸೆವೆನ್ ಸೀಸ್ ಎಕ್ಸ್ ಪ್ಲೋರರ್’ ಹಡಗಿನಲ್ಲಿ ಮಂಗಳೂರು ತಲುಪಿದ್ದಾರೆ.
ಹಡಗಿನಲ್ಲಿದ್ದ ಅನೇಕ ಪ್ರವಾಸಿಗರು ಫಿಲಾಟೆಲಿ ಬ್ಯೂರೋಗೆ ಭೇಟಿ ನೀಡಿ ಇಲ್ಲಿ ಲಭ್ಯವಿರುವ ವಿವಿಧ ಅಂಚೆ ಚೀಟಿಗಳು, ಅಂಚೆ ಸಾಮಾಗ್ರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೆ ಅನೇಕ ವಸ್ತುಗಳನ್ನು ಖರೀದಿಸಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆ ಪಾಲಕ ಎಸ್.ಪಿ.ರವಿ ಹಾಗೂ ಬ್ಯೂರೋದ ಮೇಲ್ವಿಚಾರಕಿ ದೀಪಾ ರಾವ್ ಅಂಚೆ ಚೀಟಿಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಿದರು.
ಪ್ರವಾಸಿ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ಮಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಫಿಲಾಟೆಲಿಕ್ ಬ್ಯೂರೋಗೆ ಉಚಿತವಾಗಿ ಭೇಟಿ ಏರ್ಪಡಿಸಲು ಬಯಸಿದರೆ ಫಿಲಾಟೆಲಿಕ್ ಬ್ಯೂರೋವಿನ ಸಂಪರ್ಕ ಸಂಖ್ಯೆ 0824-2441447 ಅಥವಾ ಇಮೈಲ್ [email protected] ಯನ್ನು ಸಂಪರ್ಕಿಸಬಹುದೆಂದು ಈ ಮೂಲಕ ತಿಳಿಸಲಾಗಿದೆ.