October 18, 2026
Sunday, October 18, 2026
spot_img

ಅಂಕೋಲಾದಲ್ಲಿ ಕಡವೆ ಕೊಂ*ದು ಮಾಂಸ ಮಾಡುತ್ತಿದ್ದವರ ಮೇಲೆ ಅರಣ್ಯ ಇಲಾಖೆ ದಾಳಿ: ಓರ್ವ ಅರೆಸ್ಟ್‌

ಹೊಸದಿಗಂತ ವರದಿ ಅಂಕೋಲಾ:

ವನ್ಯಜೀವಿ ಕಡವೆಯನ್ನು ಕೊಂದು ಅಡಿಕೆ ತೋಟವೊಂದರಲ್ಲಿ ಮಾಂಸ ಮಾಡಿ ಚೀಲದಲ್ಲಿ ತುಂಬುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಕಡವೆ ಮಾಂಸ ವಶಕ್ಕೆ ಪಡೆದುಕೊಂಡ ಘಟನೆ ತಾಲೂಕಿನ ರಾಮನಗುಳಿ ವಲಯ ಅರಣ್ಯ ವ್ಯಾಪ್ತಿಯ ಕಲ್ಲೇಶ್ವರ ಗ್ರಾಮದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು ಐದು ಜನರು ತಲೆಮರೆಸಿಕೊಂಡಿದ್ದಾರೆ.

ಆರೋಪಿತ ಚೆನ್ನೆಮನೆ ಕಲ್ಲೇಶ್ವರ ನಿವಾಸಿ ನಾರಾಯಣ ಗುರಕ್ಯಾ ಸಿದ್ಧಿ(60)ಎಂಬಾತನನ್ನು ದಸ್ತಗಿರಿ ಮಾಡಲಾಗಿದ್ದು, ಇನ್ನುಳಿದ ಆರೋಪಿಗಳಾದ ಕನಕನಹಳ್ಳಿ ನಿವಾಸಿ ಗಣೇಶ ರಾಮು ರಾಠೋಡ(27)ಕಲ್ಲೇಶ್ವರ ನಿವಾಸಿಗಳಾದ ಲಕ್ಷ್ಮಣ ಬಾಬು ಸಿದ್ಧಿ(55) ಲೋಕೇಶ ನಾರಾಯಣ ಸಿದ್ಧಿ(50) ಶಿವರಾಜ ಲಕ್ಷ್ಮಣ ಸಿದ್ಧಿ(30) ರಾಜು ಕೃಷ್ಣ ಸಿದ್ಧಿ(45) ತಲೆಮರೆಸಿಕೊಂಡ ಆರೋಪಿಗಳಾಗಿದ್ದಾರೆ.

ಕಡವೆಯನ್ನು ಕೊಂದು ಮಾಂಸ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಕಲ್ಲೇಶ್ವರ ಗ್ರಾಮದ ಲಕ್ಷ್ಮಣ ಸಿದ್ಧಿ ಅವರ ಅಡಿಕೆ ತೋಟಕ್ಕೆ ದಾಳಿ ನಡೆಸಿದ್ದು ಕಡವೆಯ ಚರ್ಮ ಸುಲಿದು ಮಾಂಸವನ್ನು ಚೀಲದಲ್ಲಿ ತುಂಬಿರುವುದು ಕಂಡು ಬಂದಿದೆ.

ಕೃತ್ಯಕ್ಕೆ ಬಳಸಲಾದ ಮೂರು ಕತ್ತಿಗಳು, ಒಂದು ಚಾಕು, ಒಂದು ಹೆಡ್ ಟಾರ್ಚ್ ಕೆ.ಎ30ಎಕ್ಸ್4805 ನೋಂದಣಿ ಸಂಖ್ಯೆಯ ಯಮಹಾ ಮೋಟರ್ ಸೈಕಲ್, ಕೆ.ಎ31ಇಡಿ2746 ನೋಂದಣಿ ಸಂಖ್ಯೆಯ ಬಜಾಜ ಪಲ್ಸರ್ ಬೈಕುಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವುಗಳ ಮೌಲ್ಯ ಸುಮಾರು 1.5ಲಕ್ಷ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:

ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ1972 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಕಾರವಾರ ಅರಣ್ಯ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಅಂಥೋನಿ ಮಾರಿಯಪ್ಪ ಅವರ ನಿರ್ದೇಶನದಂತೆ, ಅಂಕೋಲಾ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಪುಲ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರಾಮನಗುಳಿ ವಲಯ ಅರಣ್ಯಾಧಿಕಾರಿ ದೀಪಕ್ ನಾಯ್ಕ ನೇತೃತ್ವದಲ್ಲಿ ನಡೆದ ದಾಳಿ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರಕಾಶ ಕಲ್ಲಪ್ಪ, ಅಕ್ಷಯ.ಎಂ, ಸಂತೋಷ ಕರಚಕಟ್ಟಿ ಅರಣ್ಯ ಪಾಲಕ ಸತೀಶ ಮರ್ಚಪ್ಪ, ಅಲ್ಮಾಸ ಬಿಜಾಪುರ, ಪ್ರಭುದೇವ ಮಣಕವಾಡ, ಸೋಮನಾಥ ಕಂಬಾರ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Must Read