ಇದು ಕೋಮಾದಲ್ಲಿರುವ ಸರ್ಕಾರ ಎಂದು ಮೊದಲೇ ಗೊತ್ತಿತ್ತು: ʼಮಹಾʼ ರಾಜಕೀಯ ಬಿಕ್ಕಟ್ಟಿನ ಕುರಿತು ಸಚಿವ ಮುರುಗೇಶ ನಿರಾಣಿ ಪ್ರತಿಕ್ರಿಯೆ

ಹೊಸದಿಗಂತ ವರದಿ ವಿಜಯಪುರ:
ಮಹಾರಾಷ್ಟ್ರದಲ್ಲಿ ಒಬ್ಬರ ಬಳಿ ಸ್ಟೇರಿಂಗ್, ಒಬ್ಬರ ಬಳಿ ಬ್ರೇಕ್, ಒಬ್ಬರ ಬಳಿ ಎಕ್ಸಲೇಟರ್ ಎಂಬಂತಾಗಿದ್ದು, ಮೊದಲು ಅವರು ಸರ್ಕಾರ ಮಾಡಿದ್ದೇ ತಪ್ಪಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆ ಹಾಗೂ ಆಪರೇಷನ್ ಕಮಲ‌ ವಿಚಾರ ಕುರಿತು ನಗರದಲ್ಲಿ ಸೋಮವಾರ ಪ್ರತಿಕ್ರಿಯಿಸಿ, ಕಾಂಗ್ರೆಸ್, ಎನ್ ಸಿ ಪಿ ಹಾಗೂ ಶಿವಸೇನೆ ಸೇರಿ ಸರ್ಕಾರ ಮಾಡಿದಾಗಲೇ ಇದು ಕೋಮಾದಲ್ಲಿರುವ ಸರ್ಕಾರ ಬಹಳ‌ ದಿನ ನಡೆಯೋದಿಲ್ಲ‌ ಎಂಬುದು ಗೊತ್ತಾಗಿತ್ತು ಆ ಸರ್ಕಾರ ಇಲ್ಲಿಯ ವರೆಗೂ ನಡೆದಿದ್ದೇ ದೊಡ್ಡ ವಿಷಯ. ಮೂರು ಪಕ್ಷಗಳು ಚುನಾವಣೆಗೆ ಹೋಗಿದ್ದ ವೇಳೆ ಅವರ ಸಿದ್ಧಾಂತಗಳು, ಪ್ರಣಾಳಿಕೆಗಳು ಬೇರೆ ಬೇರೆ ಆಗಿದ್ದವು. ಹಾಗಾಗಿ ಅವರೆಲ್ಲ ಸೇರಿ ಸರ್ಕಾರ ನಡೆಸಿದ್ದೇ ತಪ್ಪಾಗಿದೆ ಎಂದರು.

ತಮ್ಮ ತಮ್ಮಲ್ಲಿನ ಒಡೆಕಿನಿಂದ ಅವರು ಹೊರಗಡೆ ಹೋಗುತ್ತಿದ್ದಾರೆ. ಇದರಲ್ಲಿ ಬಿಜೆಪಿ ಕೈವಾಡ ಇಲ್ಲ, ಬಿಜೆಪಿಯಿಂದ ಆಪರೇಷನ್ ಕಮಲ ಮಾಡಿಲ್ಲ ಐವತ್ತರಷ್ಟು ಜನರಿಗೆ ಆಪರೇಷನ್ ಕಮಲ ಮಾಡೋಕೆ ಹೇಗೆ ಸಾಧ್ಯ ? ಇದು ಸಾಧ್ಯವಿಲ್ಲದ ಮಾತು. ತಮ್ಮಲ್ಲೇ ಒಪ್ಪಿಗೆ ಇಲ್ಲದಕ್ಕೆ ಅವರು ಹೊರಗಡೆ ಬಂದಿದಾರೆ, ಮುಂದೆ ಏನು ಮಾಡಬೇಕು ಎಂಬುದು ರಾಜ್ಯ ಹಾಗೂ ರಾಷ್ಟ್ರ ನಾಯಕರು ತೀರ್ಮಾನಿಸುತ್ತಾರೆ ಎಂದರು.

ಬಿಜೆಪಿಯಿಂದ ಪ್ರತಿಯೊಬ್ಬರಿಗೆ ಐವತ್ತು ಕೋಟಿ ನೀಡಲಾಗಿದೆ ಎಂದು ಆರೋಪಿಸಿದ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ವಿಪಕ್ಷಗಳು ಮಾಡುವ ಆರೋಪ ಸತ್ಯಕ್ಕೆ ದೂರವಾಗಿದೆ. ಅವರಾಗೇ ಮುಂದೆ ಬಂದರೆ ನಮ್ಮ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಏನು ಮಾಡಬೇಕು ಎಂಬ ತೀರ್ಮಾನ ತೆಗೆದುಕೊಳ್ತಾರೆ. ಎರಡು ದಿನ ಕಾದು ನೋಡಿ, ಯಾವುದೇ ಕಾರಣಕ್ಕೂ ಆಪರೇಷನ್ ಕಮಲ‌ ಮಾಡಲ್ಲ ಎಂದರು.

ಮುಂದಿನ ಸಿಎಂ‌ ನಾನೇ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ, ಅವರು ಕನಸು ಕಾಣೋದರಲ್ಲಿ ತಪ್ಪೇನಿಲ್ಲ. ರಾಜಕಾರಣ ಮಾಡುವವರು ಕನಸು ಕಾಣಲಿ, ದೇವರು ಅವರಿಗೆ ಒಳ್ಳೇದು ಮಾಡಲಿ ಎಂದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ, ಉಮೇಶ ಕತ್ತಿ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಉಮೇಶ ಕತ್ತಿ ಅವರು ಒಂಭತ್ತು ಬಾರಿ ಚುನಾಯಿತರಾಗಿದ್ದಾರೆ. ಅವರಿಗೆ ಅನುಭವ ಇದೆ, ಅದು ಅವರ ವಯಕ್ತಿಕ ವಿಚಾರ. ಇದು ಪಕ್ಷದ್ದಾಗಲಿ ಅಥವಾ ಸರ್ಕಾರದ್ದಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!