ಹೊಸದಿಗಂತ ಡಿಜಿಟಲ್ ಡೆಸ್ಕ್
ಇಪ್ಪತ್ತರ ಹರೆಯದವರಂತೆ ಕಾಣುತ್ತಿದ್ದ ನಾಲ್ವರು ಯುವತಿಯರು ಬಿಳಿ ಕಾರಿನಲ್ಲಿ ಅಪಹರಿಸಿ, ಮಾದಕ ದ್ರವ್ಯ ನೀಡಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪಂಜಾಬ್ ನ ಜಲಂಧರ್‌ನ ಯುವಕನೊಬ್ಬ ಆರೋಪಿಸಿದ್ದಾನೆ.
ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಆತ ಘಟನೆಯ ವಿವರ ನೀಡಿದ್ದಾನೆ. ಚರ್ಮದ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುವ ಅವನು ಸೋಮವಾರ ಮನೆಗೆ ತೆರಳುತ್ತಿದ್ದಾಗ ಕಪುರ್ತಲಾ ರಸ್ತೆಯಲ್ಲಿ ನಾಲ್ವರು ಹುಡುಗಿಯರು ಕುಳಿತಿದ್ದ ಬಳಿ ಬಿಳಿ ಬಣ್ಣದ ಕಾರು ನಿಂತಿತ್ತು.
ಕಾರು ಚಲಾಯಿಸುತ್ತಿದ್ದ ಯುವತಿ ಆತನಿಗೆ ಚೀಟಿಯೊಂದನ್ನು ತೋರಿಸಿ ವಿಳಾಸ ಕೇಳಿದಳು. ಅವನು ಚೀಟಿಯನ್ನು ನೋಡಲು ಬಗ್ಗಿದಾಗ ಆ ಹುಡುಗಿ ಅವನ ಕಣ್ಣಿಗೆ ಯಾವುದೋ ರಾಸಾಯನಿಕ ಸಿಂಪಡಿಸಿದ್ದಾಳೆ. ಅದಾದ ಬಳಿಕ ಅವನಿಗೆ ಅಲ್ಲೇನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಪ್ರಜ್ಞೆ ತಪ್ಪಿದೆ. ಮುಂದೆ ಅವನಿಗೆ ಎಚ್ಚರವಾದಾಗ ಬಂದಾಗ ಅವನ ಕೈಗಳನ್ನು ಹಿಂದೆ ಕಟ್ಟಿ ಕಾರಿನಲ್ಲಿ ಕೂರಿಸಲಾಗಿತ್ತು.
ಇದಾದ ನಂತರ ಯುವತಿಯರು ಆತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಮಾದಕ ದ್ರವ್ಯ ನೀಡಿದ್ದಾರೆ. ಅವರೆಲ್ಲರೂ ಮದ್ಯಪಾನ ಮಾಡುತ್ತಿದ್ದು, ಆತನಿಗೂ ಬಲವಂತವಾಗಿ ಕುಡಿಸಿದ್ದಾರೆ. ಹುಡುಗಿಯರು ಉತ್ತಮ ಕುಟುಂಬದಿಂದ ಬಂದವರು ಎಂದು ತೋರುತ್ತದೆ. ಎಲ್ಲರೂ ತಮ್ಮ ತಮ್ಮಲ್ಲೇ ಹೆಚ್ಚಾಗಿ ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದರು. ಆದರೆ, ನನ್ನೊಂದಿಗೆ ಪಂಜಾಬಿಯಲ್ಲಿ ಮಾತನಾಡುತ್ತಿದ್ದರು. ಇದಾದ ನಂತರ ನಾಲ್ವರೂ ಸರದಿಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾನೆ.
ನಂತರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಾಲ್ವರು ಹುಡುಗಿಯರು ಅವನನ್ನು ನಿರ್ಜ ಸ್ಥಳವೊಂದರಲ್ಲಿ ಬಿಟ್ಟುಹೋಗಿದ್ದಾರೆ ಎಂದು ಯುವಕ ಹೇಳಿದ್ದಾನೆ. ಆದರೆ, ಈ ಬಗ್ಗೆ ಆತ ಪೊಲೀಸರಿಗೆ ದೂರು ನೀಡಿಲ್ಲ. ಈ ಬಗ್ಗೆ ಪತ್ನಿ ಭಯಗೊಂಡು ದೂರು ದಾಖಲಿಸದಂತೆ ಮನವಿ ಮಾಡಿದ್ದರಿಂದ ತಾನು ದೂರು ದಾಖಲಿಸಿಲ್ಲ. ತನ್ನನ್ನು ಅತ್ಯಾಚಾರದ ಉದ್ದೇಶಕ್ಕಾಗಿ ಅಪಹರಣ ಮಾಡಲಾಗಿದೆ ಎಂದು ವ್ಯಕ್ತಿ ಆರೋಪಿಸಿದ್ದಾನೆ.
ಈ ಸುದ್ದಿ ವೈರಲ್ ಆದ ಬಳಿಕ ಪಂಜಾಬ್ ಪೊಲೀಸರ ಗುಪ್ತಚರ ಇಲಾಖೆ ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಗಳು ಹೇಳಿವೆ.