Friday, June 2, 2023

Latest Posts

ಭಾರತೀಯ ಕಂಪನಿಗಳನ್ನು ಮುಚ್ಚಿಸುವ ಚೀನಾ ಮಾಸ್ಟರ್ ಪ್ಲಾನ್- ಗುಪ್ತಚರ ಮಾಹಿತಿ ಬಗ್ಗೆ ನಿಯತಕಾಲಿಕವೊಂದರ ವರದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಪೆರಂಬದೂರ್‌ನಲ್ಲಿ  ಫಾಕ್ಸ್‌ಕಾನ್ ಕಂಪನಿ ಸ್ಥಗಿತಗೊಂಡ ಬೆನ್ನಲ್ಲೇ ಇದೀಗ ಗುಪ್ತಚರ ಮಾಹಿತಿಯೊಂದು ಇದರ ಹಿಂದೆ ಚೀನಾ ಕೈವಾಡ ಇದೆ ಎಂದು ಹೇಳಿರುವುದಾಗಿ ‘ದಿ ವೀಕ್’ ವರದಿ ಮಾಡಿದೆ.

—————————————————————-

ತಮಿಳುನಾಡಿನ ಫಾಕ್ಸ್ ಕಾನ್ ಕಂಪನಿಯ ಕಾರ್ಮಿಕರ ಪ್ರತಿಭಟನೆಯ ಹಿಂದೆ ಚೀನಾ ಕೈವಾಡ ಇದೆ ಎಂದು ಗುಪ್ತಚರ ವರದಿ ಹೇಳುತ್ತಿರುವುದಾಗಿ ‘ದ ವೀಕ್’ ವರದಿ ಮಾಡಿದೆ.

ಈ ವಿದ್ಯಮಾನದ ಹಿಂದೆ ಚೀನಾ ಪ್ರಭಾವ ಇದ್ದಿರಬಹುದೇ ಎಂದು ಹೊಸ ದಿಗಂತ ಡಿಜಿಟಲ್ ಈ ಹಿಂದೆಯೇ ವಿಶ್ಲೇಷಣೆ ಮಾಡಿತ್ತು. ವಿಡಿಯೋ ನೋಡಿ.

 

—————————————————————–

ಈ ಗುಪ್ತಚರ ವರದಿಯ ಭಾಗವನ್ನು ನೋಡಿರುವುದಾಗಿ ಹೇಳಿಕೊಂಡಿರುವ ಪತ್ರಿಕೆ, ಆ ವರದಿ ಹೀಗೆ ಹೇಳುತ್ತದೆ ಎಂದು ಬರೆದಿದೆ- “ಕ್ಯಾಂಟೀನ್ ಆಹಾರದಿಂದ ಫುಡ್ ಪಾಯ್ಸನಿಂಗ್ ಆಗಿದೆ ಎಂದು ತಕ್ಷಣಕ್ಕೆ ಹುಟ್ಟಿದ ಪ್ರತಿಭಟನೆಯ ಹಿಂದೆ ಕೈಗಾರಿಕೆಗಳನ್ನು ಅಸ್ಥಿರಗೊಳಿಸುವ ಅಂತಾರಾಷ್ಟ್ರೀಯ ವಿನ್ಯಾಸವಿದೆ. ಭಾರತದ ಕಾರ್ಖಾನೆಗಳ ಮೇಲೆ ಚೀನಾ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಏಕೆಂದರೆ ಈ ಹಿಂದೆ ಆಪಲ್ ಐಫೋನ್‌ನ ಶೇ.48 ರಷ್ಟು ಭಾಗಗಳನ್ನು ಚೀನಾದಲ್ಲೇ ಉತ್ಪಾದಿಸಲಾಗುತ್ತಿತ್ತು. ಆದರೆ ಯುಎಸ್-ಚೀನಾ ವೈಷಮ್ಯದಿಂದಾಗಿ ಆಪಲ್ ಸಾಧನಗಳ ಮೇಲೆ ಸುಂಕ ವಿಧಿಸುವ ಬೆದರಿಕೆ ಹಾಕಿದ್ದರಿಂದಾಗಿ ಆಪಲ್ ಕಂಪನಿ ಭಾರತದಲ್ಲಿ ತಯಾರಕರೊಂದಿಗಿನ ಒಪ್ಪಂದಗಳ ಸ್ಥಿರತೆಯನ್ನು ಹೆಚ್ಚು ಮಾಡಿದೆ. ಚೀನಾಕ್ಕೆ ಪರ್ಯಾಯವಾಗಿ ಭಾರತವು ಆಪಲ್ ಮತ್ತಿತರ ಬಹುರಾಷ್ಟ್ರೀಯ ಕಂಪನಿಗಳ ಉತ್ಪಾದನಾ ಸ್ಥಾನವಾಗಿ ಬಲಗೊಳ್ಳುತ್ತಿರುವುದನ್ನು ಚೀನಾ ಸಹಿಸದು.”

ಈ ರೀತಿ ಕಾರ್ಮಿಕರ ಅಸಮಾಧಾನವನ್ನು ಹುಟ್ಟುಹಾಕಿಸಿ ಭಾರತದಲ್ಲಿರುವ ಕಂಪನಿಗಳ ಕಾರ್ಯವನ್ನು ಸ್ಥಗಿತಗೊಳಿಸುವ ಮಾದರಿ ಇತ್ತೀಚಿನ ದಿನಗಳಲ್ಲಿ ಇನ್ನೂ ಹಲವು ವಹಿವಾಟುಗಳ ವಿಷಯದಲ್ಲೂ ಕಂಡುಬಂದಿರುವುದಾಗಿ ವರದಿ ಉಲ್ಲೇಖಿಸಿದೆ.

ಫಾಕ್ಸ್‌ಕಾನ್ ಭಾರತದಲ್ಲಿನ ತೈವಾನ್ ಕಂಪನಿಗಳಲ್ಲಿ ಒಂದಾಗಿದೆ. ಕರ್ನಾಟಕದ ನರಸಾಪುರ ಬಳಿಯ ವಿಸ್ಟ್ರಾನ್ ಇನ್ಫೋಕಾಮ್, ಚೆನ್ನೈನ ಪೆಗಾಟ್ರಾನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕೂಡ ತೈವಾನ್ ಕಂಪನಿಗಳಾಗಿವೆ. ಇತ್ತೀಚೆಗೆ ವಿಸ್ಟ್ರಾನ್ ಕಂಪನಿ ಕೂಡ ಕಾರ್ಖಾನೆಯೊಳಗೆ ಹಲ್ಲೆ ಮತ್ತು ಹಿಂಸಾಚಾರದ ಆರೋಪದ ಕಾರಣ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

ಇದೇ ಬಗೆಯ ಪ್ರತಿಭಟನೆ ಎದುರಿಸಿ ಕೆಲಸ ಸ್ಥಗಿತಗೊಳಿಸಬೇಕಾಗಿ ಬಂದ ಕಂಪನಿಗಳ ಪಟ್ಟಿಯನ್ನು ವರದಿ ನೀಡಿದೆ. ಸನ್ಮಿನಾ, ಫೋರ್ಡ್, ಪಿಪಿಜಿ ಏಷ್ಯನ್ ಪೇಂಟ್ಸ್, ಎನ್‌ಫೀಲ್ಡ್ ಇಂಡಿಯಾ ಲಿಮಿಟೆಡ್‌ನಂಥ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಇದೇ ರೀತಿ ಅಶಾಂತಿಯ ಮಾದರಿಯನ್ನು ಕಾಣಬಹುದಾಗಿದೆ. ಶ್ರೀಪೆರಂಬದೂರಿನ ಇತರ ಕೆಲ ಕಂಪನಿಗಳಲ್ಲಿಯೂ ಅಶಾಂತಿ ಸೃಷ್ಟಿಸುವ ಗುಂಪು ಒಳನುಗ್ಗಲು ಯತ್ನಿಸುತ್ತಿದೆ ಎಂದು ವರದಿ ಹೇಳಿದೆ.

ಅಂದಹಾಗೆ, ಈ ಎಲ್ಲ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸಿದ ಕಾರ್ಮಿಕ ಗುಂಪುಗಳಲ್ಲಿ ಹೆಚ್ಚಿನವು ‘ಎಡಪಂಥೀಯ’ ರಾಜಕೀಯ ವಿಚಾರಧಾರೆಯೊಂದಿಗೆ ಗುರುತಿಸಿಕೊಂಡಂಥವುಗಳು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!