ಹೊಸದಿಗಂತ ಡಿಜಿಟಲ್ ಡೆಸ್ಕ್ :
ದೆಹಲಿಯಲ್ಲಿ ಪೊಲೀಸರು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಬಾಲಿವುಡ್ ನ ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ ಸೇರಿ ಹಲವು ಸೆಲೆಬ್ರಿಟಿಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ (Cyber Fraud) ಮಾಡಿರುವ ಪ್ರಕರಣವನ್ನು ಭೇದಿಸಿದ್ದಾರೆ.
ಐವರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮಹೇಂದ್ರ ಸಿಂಗ್ ಧೋನಿ, ಶಿಲ್ಪಾ ಶೆಟ್ಟಿ, ಅಭಿಷೇಕ್ ಬಚ್ಚನ್, ಮಾಧುರಿ ದೀಕ್ಷಿತ್, ಇಮ್ರಾನ್ ಹಶ್ಮಿ, ಅವರ ಜಿಎಸ್‌ಟಿ ಐಡೆಂಟಿಫಿಕೇಶನ್ ನಂಬರ್‌ಗಳನ್ನು ಆನ್‌ಲೈನ್ ಮೂಲಕ ಪಡೆದುಕೊಂಡು, ಅವರ ಹೆಸರಿನಲ್ಲಿ ಪ್ಯಾನ್‌ಕಾರ್ಡ್ ಸೃಷ್ಟಿಸಲಾಗಿದೆ. ಈ ಪ್ಯಾನ್‌ಕಾರ್ಡ್‌ಗಳನ್ನು ಬಳಸಿ ಸೆಲೆಬ್ರಿಟಿಗಳ ಹೆಸರಿನಲ್ಲಿ ಪುಣೆ ಮೂಲದ ಎಫ್‌ಪಿಎಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ‘ಒನ್ ಕಾರ್ಡ್’ ಎಂಬ ಕಾಂಟ್ಯಾಕ್ಟ್‌ಲೆಸ್ ಕ್ರೆಡಿಟ್ ಕಾರ್ಡ್ ಪಡೆದಿದ್ದಾರೆ ಎಂದು ಶಹಾದ್ರ ಡಿಸಿಪಿ ರೋಹಿತ್ ಮೀನಾ ತಿಳಿಸಿದ್ದಾರೆ.
ಈ ಕಾಂಟ್ಯಾಕ್ಟ್‌ಲೆಸ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಆನ್‌ಲೈನ್ ಮೂಲಕ ವಹಿವಾಟು ಮಾಡಬಹುದಾಗಿದೆ. ವಂಚಕರು ಸುಮಾರು 21.32 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.