ಕಾಶ್ಮೀರಿ ಪಂಡಿತರ ಓಲೈಕೆಗೆ ಆಪ್‌ನಿಂದ ಹೊಸ ತಂತ್ರ: ಅಂಗಡಿಗಳಿಗೆ ಉಚಿತ ವಿದ್ಯುತ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ವರ್ಷದ ಪ್ರಾರಂಭದಲ್ಲಿ ಕಾಶ್ಮೀರಿ ಪಂಡಿತರ ಸಮಸ್ಯೆಗಳನ್ನು ಬಿತ್ತರಿಸಿ ಬಿಡುಗಡೆಯಾದ, ದಿ. ಕಾಶ್ಮೀರಿ ಫೈಲ್ಸ್‌ ಸಿನಿಮಾ ವಿರುದ್ಧ ಟೀಕಾಪ್ರಹಾರ ಮಾಡಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸರ್ಕಾರ ಇದೀಗ ಕಾಶ್ಮೀರಿ ಪಂಡಿತರ ಓಲೈಕೆಗೆ ಮುಂದಾಗಿದೆ. ಕಾಶ್ಮೀರ ಪಂಡಿತರ ಅಂಗಡಿಗಳಿಗೆ ದೆಹಲಿ ಸರ್ಕಾರ ಉಚಿತ ವಿದ್ಯುತ್‌ ಸರಬರಾಜು ಮಾಡಲಿದೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಪಷ್ಟಪಡಿಸಿದ್ದಾರೆ. ವಿದ್ಯುತ್ ಸಂಪರ್ಕ ಮತ್ತು ಟ್ರಾನ್ಸ್‌ಫಾರ್ಮರ್‌ಗಳ ಅಳವಡಿಕೆಯ ಎಲ್ಲಾ ವೆಚ್ಚವನ್ನು ಕೇಜ್ರಿವಾಲ್ ಸರ್ಕಾರವೇ ಭರಿಸಲಿದ್ದು, ಒಂದು ತಿಂಗಳೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

ದೆಹಲಿಯಲ್ಲಿರುವ ಕಾಶ್ಮೀರಿ ಪಂಡಿತರ ಸಮಸ್ಯೆಗಳನ್ನು ರಾಜಕೀಯಗೊಳಿಸದೆ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಕೇಜ್ರಿವಾಲ್ ಸರ್ಕಾರ ನಿರ್ಧರಿಸಿದೆ. ಸಿಸೋಡಿಯಾ ಮಂಗಳವಾರ ಬಿಎಸ್‌ಇಎಸ್ ಮತ್ತು ಲೋಕೋಪಯೋಗಿ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಟ್ರಾನ್ಸ್ ಫಾರ್ಮರ್ ಗಳನ್ನು ಸ್ಥಾಪಿಸಲು ಮಂಜೂರು ಮಾಡಿರುವ ಜಾಗವನ್ನು ಕೂಡಲೇ ಪರಿಶೀಲಿಸುವಂತೆ ಆದೇಶಿಸಿದರು. ಒಂದು ತಿಂಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದರು.

ಇದಕ್ಕೂ ಮುನ್ನ ಕಾಶ್ಮೀರಿ ಪಂಡಿತರ ನಿಯೋಗವು ಐಎನ್‌ಎ ಮಾರುಕಟ್ಟೆಯಲ್ಲಿ 100 ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ಅಂಗಡಿಗಳಿದ್ದು, ವಿವಿಧ ನಿರ್ಮಾಣ ಚಟುವಟಿಕೆಗಳಿಂದಾಗಿ ಈ ಹಿಂದೆ ಹಲವಾರು ಬಾರಿ ವಿದ್ಯುತ್ ವ್ಯತ್ಯಯವಾಗಿದೆ ಎಂದು ಕೇಜ್ರಿವಾಲ್‌ಗೆ ಮನವಿ ಮಾಡಿದ್ದರು. ಪಂಡಿತರ ಮನವಿ ಮೇರೆಗೆ ದೆಹಲಿ ಸರ್ಕಾರ ಈ ಉಚಿತ ವಿದ್ಯುತ್‌ ಪೂರೈಕೆ ಮಾಡುವ ಕಾರ್ಯತಂತ್ರವನ್ನು ಹೆಣೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!