Sunday, March 26, 2023

Latest Posts

ಪಂಚರತ್ನ ಯಾತ್ರೆಯಿಂದ ಬಿಜೆಪಿ, ಕಾಂಗ್ರೆಸ್​​ಗೆ ಆತಂಕ: ಕುಮಾರಸ್ವಾಮಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಹಳೆ ಮೈಸೂರು ಭಾಗವನ್ನೇ ಗುರಿಯಾಗಿಸಿಕೊಂಡಿವೆ ಎಂಬ ವರದಿಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಹಳೆ ಮೈಸೂರು ಎನ್ನುವುದಕ್ಕಿಂತಲೂ ಅವರು ನಮ್ಮ ಪಕ್ಷವನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂದಿದ್ದಾರೆ.

ಜಿಲ್ಲೆಯ ಅರಸೀಕೆರೆ ತಾಲೂಕಿನ ಕರಗುಂದ ಗ್ರಾಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಅನ್ನು ಗುರಿಯಾಗಿಸಿಕೊಂಡರೆ ಈ ಬಾರಿ ಪ್ರಯೋಜನವಾಗಲಾರದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಜೆಡಿಎಸ್​​ ಅನ್ನು ಕಾಂಗ್ರೆಸ್​​ನ ಬಿ ಟೀಂ ಎನ್ನುತ್ತಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪದೇಪದೇ ಬಿಜೆಪಿಯ ಬಿ ಟೀಂ ಎನ್ನುತ್ತಾರೆ. ಆದರೆ, ನಾವು ನಾಡಿನ ಜನತೆಯ ಬಿ ಟೀಂ ಎಂದು ಹೇಳಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್​ಗೆ ನಮ್ಮ ಪಕ್ಷದ ಬೆಳವಣಿಗೆಯಿಂದ ಆತಂಕವಾಗಿದೆ. ನಾವು ಪಂಚರತ್ನ ಯಾತ್ರೆ ಮೂಲಕ ಜನರನ್ನು ತಲುಪುತ್ತಿದ್ದೇವೆ. ಇದರಿಂದ ಅವರಿಗೆ ಹೆದರಿಕೆಯಾಗಿದೆ ಎಂದು ಹೇಳಿದ್ದಾರೆ.

ನಮ್ಮ ಭದ್ರಕೋಟೆಯನ್ನು ಛಿದ್ರ ಮಾಡುತ್ತೇವೆ ಅಂತ ಹೊರಟಿದ್ದಾರೆ. ಆದರೆ, ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡರು ಬೆಳೆಸಿರುವ ಲಕ್ಷಾಂತರ ಕಾರ್ಯಕರ್ತರು ಇದ್ದಾರಲ್ಲ, ಅವರು ನಮ್ಮ ಶಕ್ತಿ. ಅವರು ಇರುವ ವರೆಗೂ ಈ ಪಕ್ಷಕ್ಕೆ ಅವರು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಹಣ ಇದೆ ಎಂದು ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೆಂಡಾಮಂಡಲವಾದ ಕುಮಾರಸ್ವಾಮಿ, ನನ್ನ ಹತ್ರ ಹಣ ಇದೆಯಂತೆಯಾ? ನಲವತ್ತು ಸೀಟ್ ಏಕಾಂಗಿಯಾಗಿ ಗೆದ್ದಿರುವುದು ಕಡಿಮೆಯೇ ಎಂದು ಪ್ರಶ್ನಿಸಿದ್ದಾರೆ. ಅವತ್ತು ಅವರಿದ್ದಾಗ (ಸಿದ್ದರಾಮಯ್ಯ) ಎಷ್ಟು ಜನ ನಾಯಕರಿದ್ದರು? 58 ಸ್ಥಾನ ಗೆಲ್ಲಬೇಕಾದರೆ ಯಾರು ಎಷ್ಟು ಕೊಡುಗೆ ನೀಡಿದ್ದಾರೆ ಎಂಬುದನ್ನು ಹೇಳಬೇಕಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಾನು ಪಂಚರತ್ನ ಯಾತ್ರೆ ಕಾರ್ಯಕ್ರಮ ಮಾಡಿದ್ದ ದಿನವೂ ನನ್ನ ಬಳಿ ಒಂದು ರೂಪಾಯಿ ಇರಲಿಲ್ಲ, ಒಂದು ರೂಪಾಯಿ ಖರ್ಚು ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಜತೆಗೆ, ಈ ನಾಡಿನ ಜನತೆ ಉತ್ತಪ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆ ಎದುರಿಸಲು ಈ ಕ್ಷಣದವರೆಗೂ ನನ್ನ ಬಳಿ ಹಣವಿಲ್ಲ. ಸಿದ್ದರಾಮಯ್ಯ ಅವರಿಗೆ ಬಹಳ ಜನ ಇದ್ದಾರೆ. ಯಾಕೆಂದರೆ ರಿಡೂ ಗಿಡೂ ಮಾಡಿದ್ದರಲ್ಲ, ಅವರೆಲ್ಲಾ ಸಂಪಾದನೆ ಮಾಡಿ ಕೊಟ್ಟಿದ್ದಾರೆ. ಆದರೆ, ನಾವು ಆ ರೀತಿ ಮಾಡಿಲ್ಲ, ರೇವಣ್ಣ ಕೂಡ ಹಾಗೆ ಮಾಡಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ನಾಡಿನ ಸಂಪತ್ತನ್ನು ಲೂಟಿ ಮಾಡಲು ಬಿಟ್ಟಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!