August 24, 2026
Monday, August 24, 2026
spot_img

ಕರ್ತವ್ಯದ ವೇಳೆ ಮದ್ಯ-ಮಾಂಸದ ಮಸ್ತಿ: 6 ಪಿಡಿಒ ಸೇರಿ 8 ಅಧಿಕಾರಿಗಳು ಸಸ್ಪೆಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ತವ್ಯದ ಅವಧಿಯಲ್ಲಿ ಕಚೇರಿ ಕೆಲಸ ಬಿಟ್ಟು ಪ್ರವಾಸಿ ತಾಣದಲ್ಲಿ ಮದ್ಯದ ಪಾರ್ಟಿ ಮಾಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮತ್ತು ಇಬ್ಬರು ಕಾರ್ಯದರ್ಶಿಗಳನ್ನು ಅಮಾನತುಗೊಳಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ 24 ಗಂಟೆಗಳ ಗಡುವು ಮತ್ತು ಕಟ್ಟುನಿಟ್ಟಿನ ಸೂಚನೆ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಅಮಾನತುಗೊಂಡ ಅಧಿಕಾರಿಗಳು

ಡಾಬಸ್ ಪೇಟೆ ಪಿಡಿಒ ರವಿಶಂಕರ್, ಶಿವಗಂಗೆ ಪಿಡಿಒ ಗಿರೀಶ್, ಅಗಲಕುಪ್ಪೆ ಪಿಡಿಒ ಹರೀಶ್, ಮರಳಕುಂಟೆ ಪಿಡಿಒ ಪ್ರಶಾಂತ್, ಪಿಡಿಒ ದಿನೇಶ್, ಸೋಪುರ/ತ್ಯಾಮಗೊಂಡ್ಲು ಹೋಬಳಿ ಪಿಡಿಒ ಚಿರಂಜೀವಿ ಮತ್ತು ಇಬ್ಬರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಕೆಂಪರಂಗಯ್ಯ, ಗಂಗಾಧರ್‌ನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಡಾ. ವಾಸಂತಿ ಅಮರ್ ಆದೇಶ ಹೊರಡಿಸಿ ಅಮಾನತುಗೊಳಿಸಿದ್ದಾರೆ.

24 ಗಂಟೆಯಲ್ಲೇ ಸಚಿವರ ಆ್ಯಕ್ಷನ್:

ಕಳೆದ ಶುಕ್ರವಾರ (ಜುಲೈ 24) ಈ ಅಧಿಕಾರಿಗಳೆಲ್ಲರೂ ಸೇರಿ ನೆಲಮಂಗಲ ತಾಲೂಕಿನ ಸಿದ್ದರಬೆಟ್ಟದ ತಪ್ಪಲಿನಲ್ಲಿ ಮದ್ಯದ ಪಾರ್ಟಿ ಮಾಡಿದ್ದರು. ಈ ಮೋಜು-ಮಸ್ತಿಯ ವಿಡಿಯೋ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಈಶ್ವರ್ ಖಂಡ್ರೆ, 24 ಗಂಟೆಗಳ ಒಳಗೆ ತನಿಖೆ ನಡೆಸಿ ವರದಿ ನೀಡುವಂತೆ ಮತ್ತು ತಪ್ಪು ಸಾಬೀತಾದಲ್ಲಿ ತಕ್ಷಣ ಅಮಾನತು ಮಾಡುವಂತೆ ಆದೇಶಿಸಿದ್ದರು.

ಇದನ್ನೂ ಓದಿ;

ಇತರ ಅಧಿಕಾರಿಗಳಿಗೂ ಕಡಕ್ ಪಾಠ:

ಸಿಇಒ ಮೊದಲಿಗೆ ಎಲ್ಲಾ ಅಧಿಕಾರಿಗಳಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಕರ್ತವ್ಯದ ಸಮಯದಲ್ಲಿ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಇಂದು ಎಲ್ಲ 8 ಜನರನ್ನು ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಈ ದಿಟ್ಟ ಕ್ರಮವು ಸಾರ್ವಜನಿಕ ಹಣದಲ್ಲಿ ಮಸ್ತಿ ಮಾಡುವ ಇತರ ಬೇಜವಾಬ್ದಾರಿ ಅಧಿಕಾರಿಗಳಿಗೂ ದೊಡ್ಡ ಪಾಠವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !