Monday, October 2, 2023

Latest Posts

ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ: 230 ಪೊಲೀಸ್ ಸಿಬ್ಬಂದಿ ನಿಯೋಜನೆ, ನಗರದಾದ್ಯಂತ ಕಟ್ಟೆಚ್ಚರ

ಹೊಸದಿಗಂತ ವರದಿ ಹುಬ್ಬಳ್ಳಿ:

ಗಣೇಶ ಚತುರ್ಥಿಗೆ ಇನ್ನೆರಡು ದಿನ ಬಾಕಿ ಉಳಿದಿದ್ದು, ನಗರದ‌ ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶ‌ ಮೂರ್ತಿ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಹು-ಧಾ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆ ಕೈಗೊಂಡಿದೆ.

ಮೈದಾ‌ನ ಸುತ್ತಮುತ್ತ 230 ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸಿದ್ದು, ಮೈದಾನದ ಸುತ್ತಮುತ್ತ ಬಿಗಿ ಭದ್ರತೆಗೆ ನಾಲ್ವರು ಎಸಿಪಿ ನೇತೃತ್ವದಲ್ಲಿ ಎಂಟು ತಂಡಗಳನ್ನು‌ ರಚಿಸಿ, ಎಂಟು ಸ್ಥಳಗಳನ್ನು ನಿಗದಿಪಡಿಸಿದೆ.

ಮೈದಾನದ ಮುಖ್ಯದ್ವಾರ(ಪೂರ್ವ ಗೇಟ್) 32, ಗಣೇಶ ಪೆಂಡಾಲ್ ಬಳಿ 29, ಮೈದಾನದ ಆವರಣದಲ್ಲಿ 31 ಹಾಗೂ ಮೈದಾನದ ಸುತ್ತ 32 ಸಿಬ್ಬಂದಿ‌ಯನ್ನು ನಾಲ್ವರು ಎಸಿಪಿ ನೇತೃತ್ವದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.

6 ಪಿಐ, 15 ಪಿಎಸ್ಐ, 25 ಎಎಸ್ಐ, 35 ಹೆಡ್ ಕಾನ್‌ಸ್ಟೆಬಲ್, 10 ಮಹಿಳಾ ಹೆಡ್ ಕಾನ್‌ಸ್ಟೆಬಲ್, 80 ಕಾನ್‌ಸ್ಟೆಬಲ್, 15 ಮಹಿಳಾ ಕಾನ್‌ಸ್ಟೆಬಲ್‌, 40 ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಹೊರತಾಗಿ 2 ಕ್ಷಿಪ್ರ ಕಾರ್ಯಪಡೆ, 2 ರಾಜ್ಯ ಸಶಸ್ತ್ರ ಮೀಸಲು ಪಡೆ, 4 ಕೇಂದ್ರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಸಹ ಭದ್ರತೆಯಲ್ಲಿ ನಿರತವಾಗಲಿವೆ.

ಪೊಲೀಸ್ ಇಲಾಖೆ ಈಗಾಗಲೇ ಮೈದಾನದ ಒಳಭಾಗದಲ್ಲಿ ಐದು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಪಾಲಿಕೆ ಸಹ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಡ್ರೋಣ್ ಕ್ಯಾಮೆರಾದಿಂದ ವಿಡಿಯೋ ಚಿತ್ರೀಕರಣ ಮಾಡಿ, ಮೈದಾನದ ಸುತ್ತಮುತ್ತಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಇಲಾಖೆ ಮುಂದಾಗಿದೆ.

ಗಣೇಶ ಪೆಂಡಾಲ್‌ ಎಡಭಾಗದಲ್ಲಿ ಪಿಎಸ್ಐ ನೇತೃತ್ವದಲ್ಲಿ 26, ಬಲಭಾಗದಲ್ಲಿ ಇಬ್ಬರು ಪಿಎಸ್ಐ ನೇತೃತ್ವದಲ್ಲಿ‌ 27, ಮೈದಾನದ ಮುಖ್ಯದ್ವಾರದಿಂದ‌ ಕಾಮತ್ ಹೊಟೇಲ್‌ವರೆಗೆ ಪಿಐ ನೇತೃತ್ವದಲ್ಲಿ 3 ಮತ್ತು ಮೈದಾನದ ಉತ್ತರ ಗೇಟ್ (ಪ್ರಭು ಮೆಡಿಕಲ್ ಶಾಪ್ ಎದುರು) ಬಳಿ‌ ಪಿಐ ನೇತೃತ್ವದಲ್ಲಿ 20 ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮೈದಾನದ ಸುತ್ತಲೂ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!