ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಗಾಂಧಿನಗರದ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಹೆಸರಿಡದ ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಮೂಡಿಬರುತ್ತಿದ್ದು, ಚಿತ್ರದ ಮಹೂರ್ತ ಅದ್ಧೂರಿಯಾಗಿ ನೆರವೇರಿದೆ. ಕಿರೀಟಿಗೆ ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಇನ್ನೊಂದು ವಿಶೇಷವೆಂದರೆ ಖ್ಯಾತ ಬಹುಭಾಷಾ ನಟಿ ಜೆನಿಲಿಯಾ ಡಿಸೋಜಾ ಈ ಚಿತ್ರದ ಮೂಲಕ ಬರೊಬ್ಬರಿ 10 ವರ್ಷದ ಬಳಿಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ನಟನೆಯ ‘ಸತ್ಯ ಇನ್ ಲವ್’ ಚಿತ್ರದಲ್ಲಿ ನಟಿಸಿದ್ದ ಜೆನೀಲಿಯಾ ವಿವಾಹದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಈ ಕುರಿತು ಮಾತನಾಡಿದ ಜೆನಿಲಿಯಾ, 10 ವರ್ಷಗಳ ಬಳಿಕ ಮತ್ತೆ ನಟನೆಗೆ ಮರಳುತ್ತಿದ್ದೇನೆ. ಇದು ತುಂಬಾನೇ ಸ್ಪೆಷಲ್ ಪ್ರಾಜೆಕ್ಟ್. ಈ ಸಿನಿಮಾ ಪೂರ್ತಿ ನಾವು ಇರುತ್ತೇವೆ ಎಂದಿದ್ದಾರೆ.
ಚಿತ್ರತಂಡವು ಕಾರ್ಯಕ್ರಮದಲ್ಲಿ ಹೀರೋ ಇಟ್ರಡಕ್ಷನ್ ಟೀಸರ್ ಬಿಡುಗಡೆ ಮಾಡಿದ್ದು, ಕಿರೀಟಿ ಆಕ್ಷನ್, ಫೈಟ್, ಆಕ್ಟಿಂಗ್ ನಲ್ಲಿ ಮಿಂಚು ಹರಿಸಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರವಸೆಯ ಯುವನಟನೊಬ್ಬನ ಪ್ರವೇಶವಾಗಲಿದೆ ಎಂಬುದು ಟೀಸರ್ ನೋಡಿದವರ ಅಭಿಪ್ರಾಯ. ತೆಲುಗಿನ ಖ್ಯಾತ ಪ್ರೊಡಕ್ಷನ್ ಹೌಸ್ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಚಿತ್ರ ಮೂಡಿಬರುತ್ತಿದ್ದು, ‘ಮಯಾಬಜಾರ್’ ಸಿನಿಮಾ ಖ್ಯಾತಿಯ ರಾಧಾಕೃಷ್ಣರೆಡ್ಡಿ ನಿರ್ದೇಶನ ವಿದೆ. ಬಾಹುಬಲಿ ಛಾಯಾಗ್ರಾಹ ಕೆ.ಕೆ.ಸೆಂಥಿಲ್ ಕುಮಾರ್ ಕ್ಯಾಮರಾ ಕೈ ಚಳಕವಿದೆ. ಖ್ಯಾತ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀಪ್ರಸಾದ್ ಸಂಗೀತ ನಿರ್ದೇಶನ, ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ಸ್ ಸಾಹಸ ನಿರ್ದೇಶನ, ರವೀಂದರ್ ಕಲಾ ನಿರ್ದೇಶನ ಚಿತ್ರಕ್ಕಿದೆ.