ಬಾಲಕಿಯರ ಸ.ಪ.ಪೂ. ಕಾಲೇಜು ಹಿಜಾಬ್ ವಿವಾದ: ಸರಕಾರಿ ಆದೇಶ ಪಾಲಿಸಿ ಸಮನ್ವಯತೆ ಕಾಪಾಡಲು ಶಾಸಕ ಭಟ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಉಡುಪಿ: ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ / ವಸ್ತ್ರ ಸಂಹಿತೆಯ ಬಗ್ಗೆ ಸರಕಾರ ಉನ್ನತ ಮಟ್ಟದ ಸಮಿತಿ ರಚಿಸಿ ಅಧ್ಯಯನ ನಡೆಸಿ, ವರದಿ ನೀಡುವವರೆಗೆ ಪ್ರಸ್ತುತ ಕಾಲೇಜುಗಳು ಪ್ರವೇಶಾತಿ ಸಂದರ್ಭದಲ್ಲಿ ವಿಧಿಸಿರುವ ನಿಯಮದಂತೆ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ತರಗತಿಗೆ ಹಾಜರಾಗುವಂತೆ ಶಾಸಕ ಕೆ. ರಘುಪತಿ ಭಟ್ ಸೂಚಿಸಿದರು.

ಉಡುಪಿ ಬಾಲಕಿಯರ ಸ.ಪ.ಪೂ. ಕಾಲೇಜಿನ 6 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಬಗೆಗಿನ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರ ಹೊರಡಿಸಿರುವ ಆದೇಶದ ಪ್ರಯುಕ್ತ ಸೋಮವಾರ ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಪೋಷಕರನ್ನು ಒಳಗೊಂಡ ಶಿಕ್ಷಣ ಸೇವಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಶೈಕ್ಷಣಿಕ ಸಂಸ್ಥೆಯಲ್ಲಿ ಸೌಹಾರ್ದತೆ ಮತ್ತು ಸಮನ್ವಯತೆ ಸಾಧಿಸಲು ಪೋಷಕರು ಮಕ್ಕಳಿಗೆ ತಿಳಿಹೇಳುವಂತೆ ಪೋಷಕರಿಗೆ ಸೂಚಿಸಿದರು. ಆರು ವಿದ್ಯಾರ್ಥಿಗಳ ಪೈಕಿ 4 ಮಂದಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ಅವರನ್ನು ಕರೆಸಿ ವಿಷಯದ ಮನವರಿಕೆ ಮಾಡಿದಾಗ, ನಾಳೆ ಒಳಗೆ ನಿರ್ಧರಿಸುವುದಾಗಿ ತಿಳಿಸಿದರು.

ಇದಕ್ಕೆ ಶಾಸಕ ರಘುಪತಿ ಭಟ್ ಅವರು ಸರಕಾರದ ಆದೇಶದಂತೆ ಉನ್ನತ ಮಟ್ಟದ ಸಮಿತಿ ವರದಿ ಬರುವವರೆಗೆ ತಾವು ಹಿಜಾಬ್ ಧರಿಸದೆ ತರಗತಿಗೆ ಹಾಜರಾಗಬೇಕು. ಹಿಜಾಬನ್ನು ಧರಿಸಿ ತರಗತಿಗೆ ಬರಬಾರದು ಎಂದು ಸ್ಪಷ್ಟವಾಗಿ ತಿಳಿಸಿದರು. ಇದನ್ನು ಧಿಕ್ಕರಿಸಿ ಹಿಜಾಬ್ ಧರಿಸಿ ಪ್ರವೇಶ ಮಾಡಿದ್ದಲ್ಲಿ ಇದನ್ನು ಅಸಿಸ್ತು ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆ ಯಾರೂ ಕಾಲೇಜು ಆವರಣ ಪ್ರವೇಶಿಸುವಂತಿಲ್ಲ. ಅದನ್ನು ಮೀರಿ ಯಾರಾದರು ಪ್ರವೇಶಿಸಿದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ, ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರು ಹಾಗೂ ವಕ್ಫ್ ಬೋರ್ಡ್ ಅಧ್ಯಕ್ಷ ದಾವೂದ್ ಅಬೂಬಕ್ಕರ್, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಸಲೀಂ ಅಂಬಾಗಿಲು ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!