Thursday, March 23, 2023

Latest Posts

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಸಂಪೂರ್ಣ ಬಹುಮತ ಕೊಡಿ: ಅಮಿತ್ ಶಾ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಬೆಂಗಳೂರು: ಜೆಡಿಎಸ್‍ಗೆ 25- 30 ಸ್ಥಾನಗಳು ಬಂದರೆ ಅದು ಕಾಂಗ್ರೆಸ್ ಜೊತೆಗೂಡುತ್ತದೆ. ಬೆಂಗಳೂರು, ದಕ್ಷಿಣ ಕರ್ನಾಟಕದಲ್ಲಿ ಸಮಗ್ರ ಅಭಿವೃದ್ಧಿ- ಮಹತ್ವಪೂರ್ಣ ಬದಲಾವಣೆ ಮಾಡಲು ಬಿಜೆಪಿಗೆ ಸಂಪೂರ್ಣ ಬಹುಮತ ಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದರು.

ದೇವನಹಳ್ಳಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ಬಿಜೆಪಿ ವಿಜಯಸಂಕಲ್ಪ 4ನೇ ಯಾತ್ರೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭ್ರಷ್ಟಾಚಾರಿಗಳ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಮತ ಕೊಡಬೇಕೇ? ಅಭಿವೃದ್ಧಿಗೆ ಬದ್ಧ ಇರುವ ಬಿಜೆಪಿಗೆ ಮತ ಕೊಡಬೇಕೇ ಎಂದು ನಿರ್ಧರಿಸಿ ಎಂದು ತಿಳಿಸಿದರು.

ಪಿಎಫ್‍ಐ ಬ್ಯಾನ್ ಮಾಡಿದ ಬಿಜೆಪಿಗೆ ಮತ ಕೊಡಬೇಕೇ? ಭಯೋತ್ಪಾದಕರಿಗೆ ಉತ್ತೇಜನ ನೀಡುವ ಕಾಂಗ್ರೆಸ್ ಬೆಂಬಲಿಸಬೇಕೇ ಎಂದು ತೀರ್ಮಾನ ಮಾಡಬೇಕು. ಕರ್ನಾಟಕದ ಬಡವರ ಕುರಿತು ಕೇವಲ ಬಿಜೆಪಿ ಚಿಂತನೆ ಮಾಡಲಿದೆ. ಕೌಟುಂಬಿಕ ಪಕ್ಷಗಳಿಂದ ಇದು ಸಾಧ್ಯವಿಲ್ಲ ಎಂದರು.

ಬೆಂಗಳೂರು ಮೈಸೂರು ದಶಪಥ ರಸ್ತೆಯನ್ನು ಸಾವಿರಾರು ಕೋಟಿಯಲ್ಲಿ ನಿರ್ಮಾಣ ಮಾಡಿದ್ದೇವೆ. ಮೊದಲ ವಂದೇ ಭಾರತ್ ಟ್ರೈನ್ ಹೈಸ್ಪೀಡ್ ರೈಲು ಆರಂಭ, ಬೆಂಗಳೂರು- ಚೆನ್ನೈ- ಮೈಸೂರು ಎಕ್ಸ್‍ಪ್ರೆಸ್ ರೈಲ್ವೆ ಕಾರಿಡಾರ್ ಕಾಮಗಾರಿ ಶುರು ಮಾಡಿದ್ದೇವೆ. ರೈಲ್ವೆಯಲ್ಲಿ 10 ವರ್ಷ ಕಾಲ ಕಾಂಗ್ರೆಸ್ ಹೂಡಿದ ಹಣಕ್ಕಿಂತ 9 ಪಟ್ಟು ಹೆಚ್ಚು ಅನುದಾನವನ್ನು ನಾವು ನೀಡಿದ್ದೇವೆ. ಮೆಟ್ರೊಗೆ 15 ಸಾವಿರ ಕೋಟಿ ಹೂಡಿಕೆ, ಸೆಟಲೈಟ್ ಟೌನ್‍ಶಿಪ್ ನಿರ್ಮಾಣ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಸೆಟಲೈಟ್ ಟೌನ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಬೆಂಗಳೂರು ವಿಮಾನನಿಲ್ದಾಣದ 2ನೇ ಟರ್ಮಿನಲ್ ಉದ್ಘಾಟನೆ ಮಾಡಿದ್ದೇವೆ. ಬೆಂಗಳೂರು ನಗರದ ಮಹತ್ವದ ಅರಿವು ನಮಗಿದೆ. ವಿಮಾನನಿಲ್ದಾಣ ಇನ್ನಷ್ಟು ವಿಸ್ತರಣೆಗೆ ಯಾವತ್ತೇ ಇದ್ದರೂ ಅನುದಾನ ನೀಡಲು ಸಿದ್ಧ ಎಂದು ಪ್ರಕಟಿಸಿದರು. ಮೋದಿಜಿ ದೇಶ ಸುರಕ್ಷತೆಗೆ ಆದ್ಯತೆ ಕೊಟ್ಟಿದ್ದಾರೆ. ಯುಪಿಎ ಅವಧಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಒಳನುಸುಳಿ ದೇಶದ ಸೈನಿಕರನ್ನು ಕೊಲ್ಲುತ್ತಿದ್ದರು. ನಾವು ಫುಲ್ವಾಮಾ ದಾಳಿಯನ್ನು ಮೋದಿಜಿ ನೇತೃತ್ವದಲ್ಲಿ ಸಮರ್ಥವಾಗಿ ಎದುರಿಸಿದ್ದೇವೆ ಎಂದು ವಿವರಿಸಿದರು.

ಯುಪಿಎ ಸರಕಾರ ಇದ್ದಾಗ 2013-14ರ ಬಜೆಟ್‍ನಲ್ಲಿ ತೆರಿಗೆ ಹಿಂತಿರುಗಿಸುವಿಕೆ ಮೂಲಕ ಕರ್ನಾಟಕಕ್ಕೆ 13 ಸಾವಿರ ಕೋಟಿ ಕೊಟ್ಟಿದ್ದೀರಿ. ಮೋದಿಜಿ 33 ಸಾವಿರ ಕೋಟಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಲ್ಲಿ ಇದಕ್ಕೆ ಉತ್ತರ ಇದೆಯೇ ಎಂದು ಪ್ರಶ್ನೆ ಮುಂದಿಟ್ಟರು. ಗ್ರಾಂಟ್ ಇನ್ ಏಯ್ಡ್‍ನಲ್ಲಿ 9 ಸಾವಿರ ಕೋಟಿ ಕೊಟ್ಟರೆ ನಾವು 45,900 ಕೋಟಿ ಕೊಟ್ಟಿದ್ದೇವೆ. ಹಣಕಾಸು ಆಯೋಗದ ಅನುದಾನವನ್ನು 3,400 ಕೋಟಿ ಬದಲಾಗಿ 7,400 ಕೋಟಿ ಕೊಡಲಾಗುತ್ತಿದೆ. ಒಟ್ಟಾಗಿ ನೀವು 25 ಸಾವಿರ ಕೋಟಿ ಕೊಟ್ಟರೆ ನಾವು 83 ಸಾವಿರ ಕೋಟಿ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಈಸ್ ಆಪ್ ಡುಯಿಂಗ್ ಬಿಸಿನೆಸ್‍ನಲ್ಲಿ ಮೊದಲ ಸ್ಥಾನ ಪಡೆದ ಕರ್ನಾಟಕಕ್ಕೆ ಅಭಿನಂದನೆಗಳು. ಗರಿಷ್ಠ ಯೂನಿಕಾರ್ನ್ ಸ್ಟಾರ್ಟಪ್‍ಗಳು ಇಲ್ಲಿವೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಶೇ 25ರಷ್ಟು ಕರ್ನಾಟಕದ ಪಾಲಿದೆ. ರಕ್ಷಣಾ ಕ್ಷೇತ್ರದಲ್ಲಿ ಶೇ 57ಕ್ಕೂ ಹೆಚ್ಚು ಪಾಲನ್ನು ಕರ್ನಾಟಕ ಕೊಡುತ್ತಿದೆ. ಉದ್ಯೋಗ ನೀಡಿಕೆ ವಿಚಾರದಲ್ಲಿ ಕರ್ನಾಟಕದಲ್ಲಿ ಶೇ 250 ಏರಿಕೆ ಕಂಡುಬಂದಿದೆ ಎಂದರು.

ಮೋದಿಜಿ ನೇತೃತ್ವದ ಕೇಂದ್ರ- ರಾಜ್ಯ ಸರಕಾರಗಳು ಹಲವಾರು ಅಭಿವೃದ್ಧಿ ಕೆಲಸ ಕಾರ್ಯ ಮಾಡಿದೆ. ಸಾವಿರಾರು ಕೋಟಿ ಮೊತ್ತದ ಕಾಮಗಾರಿಗಳು ಆರಂಭವಾಗುತ್ತಿದೆ. ಕೇಂದ್ರ ಬಜೆಟ್‍ನಲ್ಲಿ 37,257 ಕೋಟಿಯನ್ನು ಕರ್ನಾಟಕಕ್ಕೆ ನಾವು ಕೊಟ್ಟಿದ್ದೇವೆ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಗರಿಷ್ಠ ವಿದೇಶಿ ಬಂಡವಾಳ ಹೂಡಿಕೆ ಬಂದಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ರಾಜ್ಯದ ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಕೆ ಸುಧಾಕರ್, ಉನ್ನತ ಶಿಕ್ಷಣ, ಐಟಿ & ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದ್ದರು .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!