ಬಿಜೆಪಿ ಸರ್ಕಾರದ ಸಾಧನೆ ಕುರಿತು ಚರ್ಚೆಗೆ ಸಿದ್ಧ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್

ಹೊಸದಿಗಂತ ವರದಿ,ಚಿತ್ರದುರ್ಗ :

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾವುದೇ ವೇದಿಕೆಯಲಿ ಚರ್ಚಿಸಲು ನಾನು ಸಿದ್ಧ ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೇಳಿದರು.

ಜಿಲ್ಲಾ ಬಿಜೆಪಿ ವತಿಯಿಂದ ನಗರದ ಕಮ್ಮಾರೆಡ್ಡಿ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲೋಕಸಭಾ ಕ್ಷೇತ್ರದ ಬೂತ್ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರಗಳ ಸಾಧನೆ ಕುರಿತು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಯುಪಿಎ ಹಾಗೂ ಎನ್‌ಡಿಎ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾರೇ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದರು.

ನಾಯಿ ತಿನ್ನದ ಬಿಸ್ಕೆಟ್ ಕಾರ್ಯಕರ್ತರಿಗೆ
ಬಿಜೆಪಿ ಪಕ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನಮ್ಮ ನಾಯಕ. ನಾವೆಲ್ಲಾ ಬಿಜೆಪಿಯ ಮೋದಿ ಕುಟುಂಬದ ಸದಸ್ಯರು. ಅವರ ನೇತೃತ್ವದಲ್ಲಿ ಬಿಜೆಪಿ ದೇಶದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ. ಆದರೆ ಕಾಂಗ್ರೇಸ್ ಪಕ್ಷದಲ್ಲಿ ಸರಿಯಾದ ನಾಯಕನಿಲ್ಲ. ರಾಹುಲ್ ಗಾಂಧಿ ಸದಾ ನಾಯಿಯ ಜೊತೆ ತಿರುಗಾಡುತ್ತಿರುತ್ತಾರೆ. ಅವರ ನಾಯಿ ತಿನ್ನದ ಬಿಸ್ಕೆಟ್‌ನ್ನು ಕಾರ್ಯಕರ್ತರಿಗೆ ನೀಡುತ್ತಾರೆ. ಕಾಂಗ್ರೇಸ್‌ನಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲ. ಆದರೆ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ನೀಡಲಾಗುತ್ತಿದೆ ಎಂದರು.

ಕಾಂಗ್ರೇಸ್‌ನಲ್ಲಿ ಐದು ಜನ ಸಿಎಂಗಳು, ಡಿಕೆಶಿ ಡೆಪ್ಯೂಟಿ ಅಲ್ಲ, ಡಮ್ಮಿ
ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರ ಎಟಿಎಂ ಸರ್ಕಾರ. ರಾಜ್ಯದಲ್ಲಿ ಡೀಲ್ ಮಾಡಿದ ಹಣವನ್ನು ಪಕ್ಷಕ್ಕೆ ನೀಡಲಾಗುತ್ತಿದೆ. ಇಲ್ಲಿ ಲೂಟಿ ಹೊಡೆದ ಹಣವನ್ನು ಡೆಲ್ಲಿಯ ಹೈಕಮಾಂಡ್‌ಗೆ ಕಳಿಸಿಕೊಡಲಾಗುತ್ತಿದೆ. ರಾಜ್ಯ ಕಾಂಗ್ರೇಸ್‌ನಲ್ಲಿ ಐದು ಜನ ಸಿಎಂಗಳಿದ್ದಾರೆ. ಸಿದ್ದರಾಮಯ್ಯ ಸಿಎಂ, ಡೆಪ್ಯೂಟಿ ಸಿಎಂ ಡಿ.ಕೆ.ಶಿ. ಡಮ್ಮಿ ಸಿಎಂ ಆಗಿದ್ದಾರೆ. ಅಲ್ಲದೇ ಡಿ.ಕೆ.ಶಿ., ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದಾರೆ. ತಂದೆ ಎಐಸಿಸಿ ಅಧ್ಯಕ್ಷರಾಗಿರುವ ಕಾರಣ ಪ್ರಿಯಾಂಕ್ ಖರ್ಗೆ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ. ಡಾ.ಯತೀಂದ್ರ ಷೆಡ್ಯೂಲ್ ಸಿಎಂ ಆಗಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳ ಆಮಿಷ ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೇಸ್‌ನವರಿಗೆ ಬಡವರು, ರೈತರು, ಮಹಿಳೆಯರ ಬಗ್ಗೆ ಕಾಳಜಿ ಇಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ಇತರೆ ಅನುದಾನಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ೫೦೦ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಯಾವುದೇ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಬದಲಾಗಿ ಕೇವಲ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಿದೆ. ಇಂತಹ ಕಾಂಗ್ರೇಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಬೇಕು ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!