ಹೊಸದಿಗಂತ ತುಮಕೂರು:
ತಾಲೂಕಿನ ನೆಲಹಾಳ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಬೆಳಗಿನ ಜಾವ ತಮಿಳುನಾಡಿನ ಆಭರಣ ವ್ಯಾಪಾರಿಯ ಕಾರು ಅಡ್ಡಗಟ್ಟಿ 350 ಕೆ.ಜಿ ಬೆಳ್ಳಿ ಗಟ್ಟಿ, 1 ಕೋಟಿ ಹಣ ದರೋಡೆ ಮಾಡಿರುವ ಘಟನೆ ಕೋರಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹತ್ತು ವರ್ಷದಿಂದ ಅನಿಲ್ ಬೆಳ್ಳಿ ಆಭರಣ ವ್ಯಾಪಾರ ಮಾಡುತ್ತಿದ್ದು, ಸೇಲಂನಲ್ಲಿ ಆಭರಣ ಮಾರಾಟ ಮಳಿಗೆ ಹೊಂದಿದ್ದು , ಕೊಲ್ಲಾಪುರದಿಂದ ಬೆಳ್ಳಿ ಗಟ್ಟಿ ಖರೀದಿಸಿ, ಆಭರಣ ತಯಾರಿಸಿ ಮಾರಾಟ ಮಾಡುತ್ತಾರೆ.
ಏನಿದು ಪ್ರಕರಣ?
ಸೇಲಂನ ಬೆಳ್ಳಿ ಆಭರಣ ವರ್ತಕ ಅನಿಲ್ ಮಹದೇವ್ , ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಳ್ಳಿ ಗಟ್ಟಿ ಖರೀದಿಸಿ ಕಾರಿನಲ್ಲಿ ಸೇಲಂಗೆ ಕೊಂಡೊಯ್ಯುತ್ತಿದ್ದರು. ಮಗ ಬಾಲಾಜಿ, ಸ್ನೇಹಿತರಾದ ಗಣೇಶ್, ವಿನೋದ್ ಜತೆಗಿದ್ದರು. ದಾರಿ ಮಧ್ಯೆ ಮೂರು ಕಾರುಗಳಲ್ಲಿ ಬಂದ ಏಳೆಂಟು ಮಂದಿ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಬಾಲಾಜಿ, ಗಣೇಶ್, ವಿನೋದ್ ಕಾರಿನಿಂದ ಇಳಿದು ತಪ್ಪಿಸಿಕೊಂಡಿದ್ದಾರೆ.
ದರೋಡೆಕೋರರು ಅನಿಲ್ ಅವರನ್ನು ಕಾರು ಸಮೇತ ಅಪಹರಿಸಿಕೊಂಡು ಹೋಗಿದ್ದಾರೆ. ಸ್ವಲ್ಪ ದೂರ ಕರೆದೊಯ್ದು ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ಜನಹಳ್ಳಿ ಬಳಿ ಅನಿಲ್ ಮತ್ತು ಕಾರನ್ನು ಬಿಟ್ಟು, ಹಣ ಮತ್ತು ಬೆಳ್ಳಿ ಗಟ್ಟಿಗಳೊಂದಿಗೆ ಪರಾರಿಯಾಗಿದ್ದಾರೆ. ಈ ಬಗ್ಗೆ ಅನಿಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ದರೋಡೆಕೋರರು ಎಲ್ಲಿಂದ ಹಿಂಬಾಲಿಸಿಕೊಂಡು ಬಂದಿದ್ದರು, ಅವರಿಗೆ ಬೆಳ್ಳಿ ಗಟ್ಟಿ ಸಾಗಿಸುತ್ತಿರುವ ಮಾಹಿತಿ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಈ ಬಗ್ಗೆ ಕೋರಾ ಪೋಲೀಸರು ಕ್ರಮ ಕೈಗೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.