ಹೊಸದಿಗಂತ ಅಂಕೋಲಾ:
ಪಟ್ಟಣದ ಹೊನ್ನಿಕೇರಿಯ ಮನೆಯೊಂದರ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಮಾಡಿದ್ದಾರೆ.
ಕೇಣಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಇರುವ ಆರೋಗ್ಯ ಇಲಾಖೆಯ ನಿವೃತ್ತ ಸಿಬ್ಬಂದಿ ಮೋಹನ ನಾರಾಯಣ ನಾಯಕ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ.
ಸೆಪ್ಟೆಂಬರ್ 28 ರಂದು ಬೆಳಿಗ್ಗೆ 5 ಗಂಟೆಗೆ ಮೋಹನ ನಾಯಕ ಅವರು ತಮ್ಮ ಪತ್ನಿಯ ಆರೋಗ್ಯ ತಪಾಸಣೆಗೆಂದು ಹೊರ ಜಿಲ್ಲೆಯ ಆಸ್ಪತ್ರೆಗೆ ತೆರಳಿದ್ದರು ಅದೇ ದಿನ ರಾತ್ರಿ ಮನೆಗೆ ಮರಳಿ ಬಂದಾಗ ಮನೆಯ ಬಾಗಿಲು ಮುರಿದಿರುವುದು ಗಮನಕ್ಕೆ ಬಂದಿದೆ.
ಮನೆಯ ಒಳಗೆ ನುಗ್ಗಿದ ಕಳ್ಳರು ಒಳಗಡೆ ಇರುವ ಮೂರು ಕಪಾಟುಗಳನ್ನು ಒಡೆದು ಸುಮಾರು 70 ಸಾವಿರ ನಗದು, ಬಂಗಾರದ ಬಳೆ, ಕರಿಮಣಿ ಸರಗಳು ಸೇರಿದಂತೆ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಮಾಡಿದ್ದಾರೆ.
ಕಪಾಟಿನಲ್ಲಿ ಇದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಲಾಗಿದ್ದು ಹಾಡು ಹಗಲೇ ಕಳ್ಳರು ತಮ್ಮ ಕರಾಮತ್ತು ತೋರಿರುವ ಸಾಧ್ಯತೆ ಇದೆ.
ಅಂಕೋಲಾ ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.