ಗೋಣಿಕೊಪ್ಪ| ಅನುಮತಿಯಿಲ್ಲದೆ ತಡೆಗೋಡೆ ನಿರ್ಮಾಣ: ಪಂಚಾಯತ್ ನಿಂದ ತಡೆ

ದಿಗಂತ ವರದಿ, ಗೋಣಿಕೊಪ್ಪ:

ಕೀರೆಹೊಳೆ ಕೈತೋಡು ಒತ್ತುವರಿ ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಪೊನ್ನಂಪೇಟೆ ತಿರುವಿನಲ್ಲಿರುವ ಕಟ್ಟಡವೊಂದರ ಮಾಲಕರು ಅನುಮತಿ ಇಲ್ಲದೆ ತಡೆಗೋಡೆ ನಿರ್ಮಿಸಲು ಮುಂದಾಗಿದ್ದನ್ನು ಪಂಚಾಯಿತಿ ತಡೆ ಹಿಡಿದಿದೆ.
ವಾರಗಳ ಹಿಂದೆ ಕೀರೆಹೊಳೆ ಹಾಗೂ ಕೈತೋಡು ಒತ್ತುವರಿ ಕಾರ್ಯ ನಡೆದಿತ್ತು. ಆದರೆ ಎರಡು ದಿನಗಳ ಹಿಂದೆ ಪೊನ್ನಂಪೇಟೆ ತಿರುವಿನಲ್ಲಿರುವ ಕಟ್ಟಡ ಮಾಲಕರೊಬ್ಬರು ಕೀರೆಹೊಳೆಗೆ ಹೊಂದಿಕೊಂಡಂತೆ ಕಟ್ಟಡಕ್ಕೆ ತಡೆಗೋಡೆ ನಿರ್ಮಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕಾರ್ಮಿಕರು ತಡೆಗೋಡೆ ನಿರ್ಮಿಸಲು ವ್ಯವಸ್ಥೆ ರೂಪಿಸಿಕೊಂಡು ಸೆಂಟ್ರಿಂಗ್ ರಾಡುಗಳನ್ನು ಕಟ್ಟಿದ್ದರು. ಕಾಂಕ್ರೀಟ್ ಮಾಡಲು ಪ್ರಯತ್ನ ನಡೆಸುತ್ತಿದ್ದ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಚೈತ್ರಾ, ಗ್ರಾ.ಪಂ. ಸದಸ್ಯರಾದ ಹಕಿಂ, ಸೌಮ್ಯ ಬಾಲು, ವಿವೇಕ್ ರಾಯ್ಕರ್ ಹಾಗೂ ಪಿಡಿಓ ತಿಮ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಡೆಸದಂತೆ ತಡೆದರು.
ಪಂಚಾಯಿತಿ ಅನುಮತಿ ನೀಡದೆ ಅಕ್ರಮವಾಗಿ ತಡೆಗೋಡೆ ನಿರ್ಮಿಸಲು ಕಾಮಗಾರಿ ಕೈಗೆತ್ತಿಕೊಂಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅಧ್ಯಕ್ಷರು,ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಮಾಲಕರಿಗೆ ಸೂಚಿಸಿದರು.
ಅಲ್ಲದೆ ಮುಂದಿನ ದಿನಗಳಲ್ಲಿ ತಾಲೂಕು ದಂಡಾಧಿಕಾರಿ ಅವರ ಸೂಚನೆಯಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!