ದಿಗಂತ ವರದಿ, ಯಾದಗಿರಿ:
ಮೂರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಶಾಲೆಯ ವಿದ್ಯಾರ್ಥಿ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಸುದ್ದಿ ತಿಳಿದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಯ ಪೋಷಕರಿಗೆ ಸಾಂತ್ವನ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಎಸ್ಬಿಸಿ ಕಾಲುವೆಯಲ್ಲಿ ಈಜಲು ಹೋಗಿ ಕಾಲೇಜು ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಶಹಾಪುರ ತಾಲೂಕಿನ ಬೇವಿನಹಳ್ಳಿ (ಜೆ) ಹತ್ತಿರದ ಮೂರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಶಾಲೆಯ ದ್ವಿತೀಯ ಪಿಯುಸಿ ವಿಧ್ಯಾಭ್ಯಾಸ ಮಾಡುತ್ತಿದ್ದ ಹುಲಕಲ್ ಗ್ರಾಮದ ನಿಂಗಪ್ಪ ತಂದೆ ಬಸವರಾಜ (18) ಯುವಕ ಕಾಲುವೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ವಿದ್ಯಾರ್ಥಿ ಗೆಳೆಯರೊಂದಿಗೆ ಶಾಲೆಯ ಕಾಂಪೌಂಡ್ ಜಿಗಿದು ಈಜಾಡಲು ಕಾಲುವೆಗೆ ಹೊಗಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ ಎಂದು ಜೊತೆಗಿದ್ದ ವಿಧ್ಯಾರ್ಥಿಗಳು ಶಿಕ್ಷಕರಿಗೆ ತಿಳಿಸಿದ್ದಾರೆ.
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಹಾಸ್ಟೆಲ್ ವಾರ್ಡನ್ ಮತ್ತು ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ತನಿಖಾ ವರದಿಯನ್ನು ನೀಡಲು ಸಹಾಯಕ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಇನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಯುವಕನ ಶವ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದು, ವಿಶೇಷ ತಂಡ ರಚಿಸಿ ಶೋಧಕಾರ್ಯ ಚುರುಕುಗೊಳಿಸಲು ತಿಳಿಸಿದ್ದಾರೆ.
ಈ ಸಂಧರ್ಭ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಶಹಾಪುರ ತಹಶೀಲ್ದಾರ್ ಮಧುರಾಜ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸವ ಎಸ್.ಎಸ್ ಹಾಗೂ ಇತರರು ಇದ್ದರು.