ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೇ 20 ರಿಂದ ಅನಿರ್ಧಿಷ್ಟಾವದಿ ಮುಷ್ಕರಕ್ಕೆ ಸಜ್ಜಾಗಿದ್ದ ಸಾರಿಗೆ ನೌಕರರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿಹಿ ಸುದ್ದಿಯನ್ನು ನೀಡಿದ್ದು, 11 ತಿಂಗಳ ಹಿಂಬಾಕಿ ವೇತನವನ್ನು ನೌಕರರ ಬ್ಯಾಂಕ್ ಖಾತೆಗಳಿಗೆ ಸಾರಿಗೆ ಇಲಾಖೆ ಜಮೆ ಮಾಡಿದೆ.
4 ನಿಗಮಗಳ ಸಾರಿಗೆ ನೌಕರರಿಗೆ 26 ತಿಂಗಳ ಹಿಂಬಾಕಿ ನೀಡಲು ಇತ್ತೀಚೆಗೆ ರಾಜ್ಯ ಸರಕಾರ ಒಪ್ಪಿಕೊಂಡಿತ್ತು. ಈ ಸಂಬಂಧ ಮೊದಲ ಹಂತವಾಗಿ ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿ, ನೌಕರರ ಹಿಂಬಾಕಿ ಮೊತ್ತಕ್ಕಾಗಿ 450.00 ಕೋಟಿಗಳನ್ನು ಬಿಡುಗಡೆಗೊಳಿಸಿದೆ. 11 ತಿಂಗಳ ಹಿಂಬಾಕಿ ಹಣವನ್ನು ಬಿಡುಗಡೆ ಮಾಡಿ, ನೌಕರರ ಖಾತೆಗೆ ಜಮೆ ಮಾಡಲಾಗಿದೆ.
ಅದೇ ರೀತಿ 2021 ರ ಅವಧಿಯಲ್ಲಿ ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸಿ, ಸದ್ಯ ನಿವೃತ್ತಿ, ಸ್ವಯಂ ನಿವೃತ್ತಿ , ವಜಾ, ಮರಣ ಹಾಗೂ ರಾಜೀನಾಮೆ ಸೇರಿದಂತೆ ವಿವಿಧ ಕಾರಣಗಳಿಂದ ಸೇವಾ ವಿಮುಕ್ತರಾಗಿರುವ ಅರ್ಹ ಅಧಿಕಾರಿ,ನೌಕರರಿಗು ಹಿಂಬಾಕಿ ಮೊತ್ತವನ್ನು ಪಾವತಿಸಲು ನಿರ್ಧರಿಸಿದ್ದಾರೆ.
ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಇತರ ಸಾರಿಗೆ ನಿಗಮಗಳಿಗೆ ವರ್ಗಾವಣೆಗೊಂಡಿರುವವರಿಗೂ ಹಿಂಬಾಕಿ ಮೊತ್ತವನ್ನು ವರ್ಗಾಯಿಸಲು ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ವರ್ಷಗಳಿಂದ ಕಾಯುತ್ತಿದ್ದ ಸಾವಿರಾರು ಸಾರಿಗೆ ನೌಕರರ ಕುಟುಂಬಗಳಲ್ಲಿ ಸಂತಸ ಮೂಡಿದೆ.



