Thursday, August 18, 2022

Latest Posts

ಮಕರ ಸಂಕ್ರಾಂತಿಗೆ ಅಯೋಧ್ಯೆ ಪುಣ್ಯ ಭೂಮಿಯಿಂದ ಸಿಗಲಿದೆ ಶುಭಸುದ್ದಿ!

ಹೊಸದಿಗಂತ ವರದಿ, ಮಂಗಳೂರು:

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ 2024ರ ಜನವರಿಯ ಮಕರ ಸಂಕ್ರಾಂತಿಗೆ ಪೂರ್ಣಗೊಳ್ಳಲಿದೆ ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸನಾತನ ಸಂಸ್ಕೃತಿಯ ಪ್ರತೀಕವಾಗಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಗೊಳ್ಳುತ್ತಿದೆ. ಮಂದಿರದ ಸ್ಥಳದಲ್ಲಿ 40 ಅಡಿ ಆಳದ ತನಕ ಇದ್ದ ಧೂಳು ಮಿಶ್ರಿತ ಮಣ್ಣನ್ನು ಹೊರಹಾಕಿ ಭೂಮಿಯನ್ನು ದೃಢಗೊಳಿಸಲಾಗಿದೆ. ಕಳೆದ ತಿಂಗಳು ಶಿಲಾಸ್ಥಾಪನೆ ನೆರವೇರಿಸಲಾಗಿದೆ. ಪೂರ್ವನಿಗದಿಯಂತೆ ಮಂದಿರ ನಿರ್ಮಾಣ ಕಾರ್ಯ ಸಾಗುತ್ತಿದೆ. ಮುಂದಿನ ವರ್ಷದ ಅಂತ್ಯದಲ್ಲಿ ಕಾಮಗಾರಿ ಮುಗಿಸಿ, ಶ್ರೀರಾಮ ದೇವರ ಪ್ರತಿಷ್ಠೆ ನೆರವೇರಲಿದೆ ಎಂದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಆದ್ಯತೆ ಮಂದಿರ ನಿರ್ಮಾಣ. ಅದು ಪೂರ್ಣಗೊಂಡ ಬಳಿಕ ಟ್ರಸ್ಟ್ ಸಮಾಜಮುಖಿ ಕೆಲಸ ಮಾಡಲಿದೆ. ಈ ಬಗ್ಗೆ ತಾವು ಟ್ರಸ್ಟ್‌ನ ಸಭೆಯಲ್ಲಿ ಪ್ರಸ್ತಾವಿಸಿದ್ದೇವೆ. ಗ್ರಾಮಗಳನ್ನು ಶ್ರೀರಾಮ ದೇವರ ಹೆಸರಿನಲ್ಲಿ ಒಂದು ವರ್ಷ, ಐದು ವರ್ಷಗಳ ಕಾಲ ದತ್ತು ಪಡೆದು ಅಭಿವೃದ್ಧಿಗೊಳಿಸುವುದು, ರಾಮ ರಾಜ್ಯ ನಿರ್ಮಾಣದ ಗುರಿ ಇರಿಸಿಕೊಳ್ಳಲಾಗಿದೆ ಎಂದರು.
ರಾಜಸ್ಥಾನದಲ್ಲಿ ನಡೆದ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ನಾವೆಲ್ಲರೂ ನಾಗರಿಕ ಸಮಾಜದಲ್ಲಿ ದೇಶದ ಸಂವಿಧಾನದ ಅಡಿಯಲ್ಲಿ ಬಾಳುತ್ತಿದ್ದೇವೆ. ದೇಶದಲ್ಲಿ ಕೆಲವು ಅನಾಗರಿಕರ ಪ್ರವೇಶದಿಂದ ದುಷ್ಕೃತ್ಯಗಳು ನಡೆಯುತ್ತಿವೆ. ಅಂತಹಾ ಅನಾಗರಿಕರನ್ನು ಮಟ್ಟಹಾಕುವುದು ಸರಕಾರದ ಕೆಲಸ. ಈ ಕಾರ್ಯವನ್ನು ಸರಕಾರ ನಿಷ್ಪಕ್ಷಪಾತವಾಗಿ, ಅವಶ್ಯವಾಗಿ ಮಾಡಬೇಕು. ಸರಕಾರ ಕ್ರಮ ಕೈಗೊಳ್ಳದಿದ್ದರೆ ನಾಗರಿಕರ ಬದುಕು ಸಾಧ್ಯವಿಲ್ಲ ಎಂದರು.
ಈ ಬಾರಿಯ ಚಾತುರ್ಮಾಸ್ಯ ದೀಕ್ಷೆಯನ್ನು ಹೈದರಾಬಾದ್, ಸಿಕಂದರಾಬಾದ್ ಅವಳಿ ನಗರಗಳಲ್ಲಿ ಜುಲೈ 13ರಿಂದ ಸೆ.10ರವರೆಗೆ ನಡೆಸಲಿದ್ದೇವೆ ಎಂದು ಪೇಜಾವರ ಶ್ರೀ ತಿಳಿಸಿದರು.
ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!