Tuesday, May 30, 2023

Latest Posts

ಬುಡಕಟ್ಟು ಜನರಿಗೆ ಸರ್ಕಾರದ ಅನುದಾನ ತಲುಪುತ್ತಿಲ್ಲ: ಬೋಧಾನಂದ ಸ್ವಾಮೀಜಿ

ಹೊಸದಿಗಂತ ವರದಿ ಮಡಿಕೇರಿ:

ಗಿರಿಜನ ಬಾಹುಳ್ಯವಿರುವ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆಯಲ್ಲಿ ಕಾಂಗ್ರೆಸ್ ಎಸ್‍ಟಿ ಘಟಕದ ವತಿಯಿಂದ ‘ಬುಡಕಟ್ಟು ಸಮುದಾಯಗಳ ಸಮಾವೇಶ’ ಬೃಹತ್ ಮೆರವಣಿಗೆಯೊಂದಿಗೆ ನಡೆಯಿತು. ಸೋಮವಾರ ಸಮಾವೇಶದಲ್ಲಿ ಪಾಲ್ಗೊಂಡ ಶ್ರೀ ಬೋಧಾನಂದ ಸ್ವಾಮೀಜಿ, ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ಒಂದೇ ಪಕ್ಷದ ಶಾಸಕರು ಅಧಿಕಾರದಲ್ಲಿದ್ದರೂ, ಗಿರಿಜನ ಸಮೂಹಕ್ಕೆ ಇಂದಿಗೂ ನೆಮ್ಮದಿಯ ಬದುಕಿಗೆ ಸೂಕ್ತ ಸೂರು, ಕುಡಿಯುವ ನೀರು, ಮೂಲ ಸೌಲಭ್ಯ ದೊರಕಿಲ್ಲ. ಬುಡಕಟ್ಟು ಸಮುದಾಯಕ್ಕೆ ವಿನಿಯೋಗವಾಗಬೇಕಾದ ಸರ್ಕಾರದ ಅನುದಾನ ಕೊಡಗಿನಲ್ಲಿ ಸಮರ್ಪಕವಾಗಿ ಬಳಕೆಯಾಗಿಲ್ಲವೆಂದು ದೂರಿದರು.

ಆದಿವಾಸಿ ಸಮೂಹವನ್ನು ಸದಾ ಕತ್ತಲಲ್ಲಿಯೇ ಇರಿಸಲಾಗಿದೆ, ಶೋಷಿತ ಸಮೂಹವನ್ನು ನಿರ್ಲಕ್ಷಿಸಿದ ರಾಜಕಾರಣಿಗಳು ಮಾತ್ರ ಬೆಳೆದಿದ್ದಾರೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ, ಕಳೆದ 20 ವರ್ಷಗಳಿಂದ ಆದಿವಾಸಿಗಳ ಜೀವನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಟೀಕಿಸಿದರು.

ಭ್ರಷ್ಟಾಚಾರ ಕೊನೆಗಾಣಿಸಿ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಮಾತನಾಡಿ, ಕಾಂಗ್ರೆಸ್‍ನಿಂದ ವಿತರಿಸಲಾಗುತ್ತಿರುವ ‘ಗ್ಯಾರಂಟಿ ಕಾರ್ಡ್’ ಬೋಗಸ್ ಕಾರ್ಡ್’ ಅಲ್ಲ, ಇದು ಬದಲಾವಣೆಯ ಕಾರ್ಡ್. ಪ್ರತಿಯೊಬ್ಬರ ಜೀವನ ಕೂಡಾ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬದಲಾವಣೆಯನ್ನು ಕಾಣಲಿದ್ದು, ಈಗಿನ ಬಿಜೆಪಿ ಭ್ರಷ್ಟಾಚಾರವನ್ನು ಚುನಾವಣೆಯಲ್ಲಿ ಕೊನೆಗಾಣಿಸುವಂತೆ ಕರೆ ನೀಡಿದರು.

ಗಮನ ಸೆಳೆದ ಸಾಧು ಕೋಕಿಲ: ಚಲನಚಿತ್ರ ನಟ, ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಸಾಧು ಕೋಕಿಲ ಅವರು ಹಾಡು ಹೇಳಿ, ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಗಮನ ಸೆಳೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!