Saturday, August 13, 2022

Latest Posts

ಶಾಸಕಿ ರೂಪಾಲಿ ನಾಯ್ಕ ಮನವಿಗೆ ಸ್ಪಂದಿಸಿದ ಸರ್ಕಾರ: ಕುಡಿಯುವ ನೀರಿನ ಬೃಹತ್ ಯೋಜನೆಗಳಿಗೆ 119 ಕೋಟಿ ರೂ.ಗೆ ಸರ್ಕಾರ ಸಮ್ಮತಿ

ಹೊಸದಿಗಂತ ವರದಿ,ಕಾರವಾರ:

ಕಾರವಾರ ಅಂಕೋಲಾ ಕ್ಷೇತ್ರದ ಕುಡಿಯುವ ನೀರಿನ 3 ಬೃಹತ್ ಯೋಜನೆಗಳಿಗೆ ರಾಜ್ಯ ಸರ್ಕಾರ 119 ಕೋಟಿ ರೂ. ನೀಡಲು ಸಮ್ಮತಿ ನೀಡಿದೆ. ಶಾಸಕರಾದ ರೂಪಾಲಿ ಎಸ್.ನಾಯ್ಕ ಅವರ ಮನವಿಯ ಹಿನ್ನೆಲೆಯಲ್ಲಿ ಕಾರವಾರ ತಾಲೂಕಿನ ಗೋಟೆಗಾಳಿ, ಕೆರವಡಿ ಹಾಗೂ ಅಂಕೋಲಾ ತಾಲೂಕಿನ ವಾಸರಕುದ್ರಿಗಿಯಲ್ಲಿ ಜಲ್ ಜೀವನ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಮನೆ ಮನೆಗಳಿಗೆ ನೀರು ಸರಬರಾಜು ಆಗಲಿದೆ. ಬುಧವಾರ ಸಚಿವ ಸಂಪುಟ ಈ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಯೋಜನೆಯಿಂದ ಕಾರವಾರ ಕಾಳಿ ನದಿಯ ಕಾರವಾರ ತಾಲ್ಲೂಕಿನ ಎರಡೂ ದಂಡೆಗಳಲ್ಲಿನ ಜನರಿಗೆ ಹಾಗೂ ಅಂಕೋಲಾದ ಗಂಗಾವಳಿ ನದಿ ತೀರದ ಊರುಗಳ ಜನತೆ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.
ಕಾರವಾರ ತಾಲ್ಲೂಕಿನ ಗೋಟೆಗಾಳಿ ಮತ್ತು ಇತರ 22 ಗ್ರಾಮಗಳ 43 ಜನವಸತಿ ಪ್ರದೇಶಗಳಿಗೆ ಹಾಗೂ ಕೆರವಡಿ ಮತ್ತು ಇತರ 17 ಗ್ರಾಮಗಳ 42 ಜನವಸತಿ ಪ್ರದೇಶಗಳಿಗೆ ಜಲ್ ಜೀವನ ಮಿಷನ್ ಅಡಿಯಲ್ಲಿ ಸಂಯೋಜಿತ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ (ಎರಡೂ ಯೋಜನೆ ಸೇರಿ) 88.50 ಕೋಟಿ ರೂ. ನೀಡಲು ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ.
ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗಿ ಮತ್ತು ಇತರ 5 ಗ್ರಾಮಗಳ 23 ಜನವಸತಿ ಪ್ರದೇಶಗಳಿಗೆ ಜಲಜೀವನ ಮಿಷನ್ ಅಡಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ 30.27 ಕೋಟಿ ರೂಪಾಯಿಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಗೋಟೆಗಾಳಿ ಹಾಗೂ ಇತರ 9 ಗ್ರಾಮಗಳು ಈ ಯೋಜನೆಯ ವ್ಯಾಪ್ತಿಯಲ್ಲಿ ಬರಲಿದೆ. 2020-21ರ ಜಲ ಜೀವನ್ ಮಿಷನ್ ನ ಬಹುಗ್ರಾಮ ನೀರು ಸರಬರಾಜು ಯೋಜನೆಯಲ್ಲಿ ಬೃಹತ್ ಪ್ರಮಾಣದ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಯ ಸಾಮರ್ಥ್ಯ ಹೆಚ್ಚಿಸಲು ಯೋಜಿಸಲಾಗಿದೆ. ಪೈಪ್ ಲೈನ್, ಪಂಪಿಂಗ್ ಯಂತ್ರೋಪಕರಣಗಳು, ಅಸ್ತಿತ್ವದಲ್ಲಿರುವ ಘಟಕಗಳ ದುರಸ್ತಿ ಇತ್ಯಾದಿಗಳ ಗುಣಮಟ್ಟ ಹಾಗೂ ಸಾಮರ್ಥ್ಯ ಹೆಚ್ಚಿಸಲಾಗುವುದು.
ಈ ಹಿಂದಿನ ಯೋಜನೆ ಪ್ರತಿ ವ್ಯಕ್ತಿಗೆ ಪ್ರತಿದಿನ 40 ಲೀ. ನೀರು ನೀಡುವ ಸಾಮರ್ಥ್ಯ ಹೊಂದಿದ್ದರೆ, ಜಲಜೀವನ್ ಮಿಷನ್ ಯೋಜನೆಯಲ್ಲಿ ಕನಿಷ್ಠ 55 ಲೀ. ನೀಡುವ ಉದ್ದೇಶ ಹೊಂದಲಾಗಿದೆ.
ಗೋಟೆಗಾಳಿ ಹಾಗೂ ಕೇರವಡಿ ಯೋಜನೆಯಿಂದ ವಿರ್ಜೆಯಿಂದ ಮಾಜಾಳಿ ಹಾಗೂ ವಿರ್ಜೆಯಿಂದ ಮಖೇರಿ ತನಕ ಕುಡಿಯುವ ನೀರು ಸರಬರಾಜು ಆಗಲಿದೆ. ಕಾಳಿ ನದಿಯ ಎರಡೂ ಕಡೆಗಳಲ್ಲಿ ಕುಡಿಯುವ ನೀರು ಲಭ್ಯವಾಗಲಿದೆ.
ವಾಸರಕುದ್ರಿಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಃ
ಗಂಗಾವಳಿ ನದಿಯಿಂದ ಉಳಗದ್ದೆ ಕ್ರಾಸ್ ಬಳಿ ನೀರನ್ನು ಎತ್ತಿ ಪೂರೈಕೆ ಮಾಡುವ ಯೋಜನೆ ಇದಾಗಿದೆ.
ವಾಸರಕುದ್ರಿಗಿ, ಬೆಳಸೆ, ಶೆಟಗೇರಿ, ವಂದಿಗೆ, ಹೊನ್ನೆಬೈಲ್, ಬೆಳಂಬಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಈ ಯೋಜನೆಯಿಂದ ಕುಡಿಯುವ ನೀರು ಲಭ್ಯವಾಗಲಿದೆ. ಈ ಹಿಂದಿನ ಯೋಜನೆಯಲ್ಲಿನ ಪೈಪುಗಳು ಹಳೆಯದಾಗಿವೆ. ನೀರು ಸೋರಿಕೆಯಾಗುತ್ತಿದೆ. ಇವುಗಳನ್ನು ಬದಲಿಸಿ, ಗುಣಮಟ್ಟ ಹಾಗೂ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss