ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಕರ್ನಾಟಕದಲ್ಲಿ ಹೊಸ ಯುವ ನೀತಿಯನ್ನು ತರಲು ಸರಕಾರ, ಇಲಾಖೆ ತೀರ್ಮಾನ ನೀಡಿದೆ. ಇದು ಯುವಕರಿಗೆ ಮಾದರಿಯ ಮಾರ್ಗದರ್ಶನವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ನಡೆದ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಯುವ ಸಪ್ತಾಹವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು.
ಯುವಕರಿಗಾಗಿ ತತ್ತ್ವ ಆಧಾರಿತ, ವೈಚಾರಿಕ, ಅವರ ಚಟುವಟಿಕೆಗಳಿಗೆ ಹೆಚ್ಚಿನ ಬೆಂಬಲ, ಪ್ರೋತ್ಸಾಹ ನೀಡಲು ಸರಕಾರ ಬದ್ಧವಿದೆ. ಮುಂದಿನ ಬಜೆಟ್‌ನಲ್ಲಿ ಇದು ಪ್ರತಿಫಲನಗೊಳ್ಳುತ್ತದೆ ಎಂದ ಸಿಎಂ, ನಮ್ಮ ಯುವಕರಿಗೆ ಸ್ವಾಮಿ ವಿವೇಕಾನಂದರ ವಿಚಾರ, ನೀತಿ, ಬದುಕುವ ವಿಧಾನಗಳನ್ನು ಮನದಟ್ಟು ಮಾಡುವ ಕೆಲಸ ಸರಕಾರ, ಸಮಾಜದಿಂದ ನಡೆಯಬೇಕಾಗಿದೆ ಎಂದು ಕರೆ ನೀಡಿದರು.
ಸ್ವಾಮಿ ವಿವೇಕಾನಂದರು ಯುಗ ಪುರುಷರು. ವಿವೇಕ ಇದ್ದಲ್ಲಿ ಆನಂದವಿದೆ, ವಿವೇಕ ಇಲ್ಲದ್ದಲ್ಲಿ ಆನಂದವೂ ಇಲ್ಲ. ವಿವೇಕ ಇರಬೇಕಾಗಿರುವುದು ಪ್ರತಿಯೊಬ್ಬ ಮನುಷ್ಯನ ಅಂತರ್ಗತವಾಗಿರುವ ಗುಣಧರ್ಮ. ಇದನ್ನು ಯಾವ ರೀತಿ, ಯಾಕಾಗಿ ಬಳಸುತ್ತೇವೆ ಎಂಬುದು ಮುಖ್ಯ. ಸ್ವಾಮಿ ವಿವೇಕಾನಂದ ವ್ಯಕ್ತಿತ್ವ ಹಲವು ಆಯಾಮಗಳನ್ನು ಹೊಂದಿದೆ. ವಾಸ್ತವಿಕ ಬದುಕಿನ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಅವರು ಮಾಡಿದ್ದಾರೆ. ಯೌವನದಲ್ಲಿ ಮಾತ್ರ ಮಹತ್ವದ ಬದಲಾವಣೆ ತರಲು ಸಾಧ್ಯ ಎಂಬುದು ಸ್ವಾಮಿ ವಿವೇಕಾನಂದ ಪ್ರಬಲ ನಂಬಿಕೆ. ಅದಕ್ಕೆ ಅನುಗುಣವಾಗಿ ಬದುಕು ನಡೆಸಿದ್ದರು. ಬದುಕಿನ ಯಶಸ್ಸು ಮತ್ತು ಸಾ.ಧನೆ ಎರಡನ್ನೂ ಬೇರೆ ಬೇರೆ ದೃಷ್ಟಿಯಿಂದ ನೋಡುತ್ತಿದ್ದರು. ಯಶಸ್ಸು ಸೀಮಿತವಾಗಿರುವಂತಹದ್ದು, ಆದರೆ ಸಾಧಕನಿಗೆ ಎಲ್ಲವೂ ಶಾಶ್ವತ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಅಶ್ವತ್ಥ್‌ನಾರಾಯಣ, ಡಾ. ನಾರಾಯಣ ಗೌಡ ಮೊದಲಾದವರಿದ್ದರು.