ಗೋವಿಂದ ಕಾರಜೋಳ ಗೆದ್ದಲ್ಲಿ ಕೇಂದ್ರ ಸಚಿವರಾಗಲಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಹೊಸ ದಿಗಂತ ವರದಿ , ಚಿತ್ರದುರ್ಗ 
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಗೆದ್ದಲ್ಲಿ ಕೇಂದ್ರ ಸಚಿವರಾಗಲಿದ್ದಾರೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಹಾಗಾಗಿ ಜಿಲ್ಲೆಯ ಜನರು ಕಾರಜೋಳ ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದರು.

ಹೊಳಲ್ಕೆರೆ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲೋಕಸಭಾ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಬೂತ್ ಮಟ್ಟದಲ್ಲಿ  ಮತ ಗಳಿಸುವ ಕೆಲಸ ಆಗಬೇಕಿದೆ. ವಿಶ್ವಕರ್ಮ ಯೋಜನೆ, ಜಲ ಜೀವನ ಮಿಷನ್ ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕಿದೆ. ಬೂತ್ ಮಟ್ಟದ ನಾಯಕರು ಮನೆ ಮನೆಗೆ ಹೋಗಿ ಕೇಂದ್ರದ ಸಾಧನೆಗಳನ್ನು ತಿಳಿಸಬೇಕು. ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಒಂದಾಗಿ ಕಾರಜೋಳ ಅವರನ್ನು ೨ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬರಬೇಕೆಂಬ ಕೂಗು ರಾಜ್ಯದ ಎಲ್ಲೆಡೆ ಕೇಳಿಬರುತ್ತಿದೆ. ಹತ್ತು ವರ್ಷಗಳಲ್ಲಿ ಒಂದು ದಿನವೂ ರಜೆ ಪಡೆಯದೆ ಅವಿರತವಾಗಿ ದೇಶಕ್ಕಾಗಿ ದುಡಿಯುತ್ತಿದ್ದಾರೆ. ತಮ್ಮ ತಾಯಿಯ ಅಂತ್ಯ ಸಂಸ್ಕಾರಕ್ಕೆ ಕೇವಲ ೨ ಗಂಟೆಗಳ ಕಾಲ ಹೋಗಿ ಬಂದು, ಬಳಿಕ ಪ್ರಧಾನಿ ಕಚೇರಿಯಲ್ಲಿ ಕಾರ್ಯ ನಿರತರಾಗುತ್ತಾರೆ. ಇಂತಹ ಪ್ರಧಾನಿಯನ್ನು ಪಡೆದ ನಾವೇ ಭಾಗ್ಯವಂತರು. ಹಾಗಾಗಿ ಇವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚರ ರಹಿತ ಆಡಳಿತ ನೀಡುತ್ತಿದ್ದಾರೆ. ಅವರು  ಕೊಡುವ ಯೋಜನೆಗಳು ಬಡವರು, ರೈತರು, ಮಹಿಳೆಯರು, ಯುವಕರು ಈ ನಾಲ್ಕು ವರ್ಗದ ಜನರಿಗೆ ತಲುಪಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ೪ ಲಕ್ಷ ೭೫ ಸಾವಿರ ಕೋಟಿ ಅನುದಾನ ಬಂದಿದೆ. ಆದರೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಹಾಲಿಗೆ ೩ ರಿಂದ ೫ ರೂ. ಪ್ರೋತ್ಸಾಹ ಧನ ನೀಡಲಾಯಿತು. ಕಾಂಗ್ರೆಸ್ ಬಂದ ಮೇಲೆ ೬೭೦ ಕೋಟಿ ಪ್ರೋತ್ಸಾಹ ಧನದಲ್ಲಿ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುತ್ತಿದ್ದ ೪ ಸಾವಿರ ನಿಲ್ಲಿಸಿದರು. ರೈತ ವಿದ್ಯಾನಿಧಿಗೆ ಕಲ್ಲು, ಬರ ಪರಿಹಾರ ನೀಡಿಲ್ಲ. ಕೇವಲ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ೯ ರಾಜ್ಯದಗಳಲ್ಲಿ ಬರಗಾಲವಿದೆ. ಅಲ್ಲಿನ ಮುಖ್ಯಮಂತ್ರಿಗಳು ತಮ್ಮ ಖಜಾನೆಯಿಂದ ಬರ ಪರಿಹಾರ ನೀಡುತ್ತಿದ್ದಾರೆ. ಉಚಿತ ವಿದ್ಯುತ್ ಎಂದು ದರ ಹೆಚ್ಚಿಸಿದ್ದಾರೆ. ದುಬಾರಿ ಕರೆಂಟ್ ಬಿಲ್ಲ ಬರುತ್ತಿದೆ. ಬಿಎಸ್‌ವೈ ಕಾಲದಲ್ಲಿ ೨೫ ಸಾವಿರ ರೂ. ನೀಡಿದರೆ ರೈತರ ಜಮೀನುಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿದ್ದರು. ಕಾಂಗ್ರೆಸ್ ಬಂದ ಮೇಲೆ ೨-೩ ಲಕ್ಷ ರೂ. ಕಟ್ಟಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಬಂದ ಮೇಲೆ ಬೆಲೆ ಏರಿಕೆ ಬಿಟ್ಟು ಬೇರೇನೂ ಸಾಧನೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ದೇವೇಗೌಡರು ಬೆಂಬಲ ನೀಡಿದ್ದಾರೆ. ಇದರಿಂದ ಸಿ.ಎಂ. ಸಿಎಂಗೆ ನಿದ್ದೆ ಬರುತ್ತಿಲ್ಲ. ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುವುದಿಲ್ಲ. ಮೋದಿಯವರು ದೇಶದ ಎಲ್ಲ ಬಡವರು ಹಸಿವಿನಿಂದ ಬಳಲಬಾರದೆಂದು ೫ ಕೆ.ಜಿ. ಅಕ್ಕಿ ನೀಡುತ್ತಿದ್ದಾರೆ. ೧೦ ಕೆ.ಜಿ. ಕೊಡುತ್ತೇವೆ ಎಂದವರು ಕನಿಷ್ಟ ಒಂದು ಕೆ.ಜಿ. ಕೊಡಲು ಆಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೆತ್ತಿದರೆ ಅಂಬೇಡ್ಕರ್ ಹೆಸರನ್ನು ಹೇಳುತ್ತಾರೆ. ಅಂಬೇಡ್ಕರ್ ಬದುಕಿದ್ದಾಗಲೇ ಕಗ್ಗೊಲೆ ಮಾಡಿದವರು ಕಾಂಗ್ರೆಸ್‌ನವರು. ಅವರ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಅಂಬೇಡ್ಕರ್ ಅವರ ಹೆಸರು ಹೇಳಲು ಕಾಂಗ್ರೆಸ್‌ನವರಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ನರೇಂದ್ರ ಮೋದಿಯವರು ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ  ಕಾಂಗ್ರೆಸ್‌ನವರಿಗೆ ನಾಯಕರಾಗುವಷ್ಟು ಸ್ಥಾನ ಗಳಿಸಲು ಸಾಧ್ಯವಿಲ್ಲ. ೪೦೦ಕ್ಕೂ ಹೆಚ್ಚು ಗೆದ್ದು ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ. ಕಾಂಗ್ರೆಸ್‌ನಲ್ಲಿ ಪ್ರಧಾನಿ ಆಗುವವರು ಯಾರೂ ಇಲ್ಲ. ಹಾಗಾಗಿ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ. ಹಾಗಾಗಿ ಕ್ಷೇತ್ರದ ಜನರು ನನ್ನನ್ನು ಬೆಂಬಲಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು. ಆ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಶಾಸಕ ಎಂ.ಚಂದ್ರಪ್ಪ, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ,  ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್, ನರೇಂದ್ರ ಹೊನ್ನಾಳ್, ಸಂಪತ್‌ಕುಮಾರ್ ಸೇರಿದಂತೆ ಬಿಜೆಪಿ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!