ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚುತ್ತಿರುವ ಡೀಪ್‌ಫೇಕ್ ವಿಡಿಯೋಗಳ ಬಗ್ಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ನಿಲುವು ತೆಗೆದುಕೊಂಡಿದ್ದು, ಗೂಗಲ್, ಫೇಸ್‌ಬುಕ್, ಯೂಟ್ಯೂಬ್‌ಗೆ ಸಮನ್ಸ್ ನೀಡಿದೆ. ಈ ಕುರಿತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ನವೆಂಬರ್ 24 ರಂದು ಕೇಂದ್ರ ಸರ್ಕಾರವು ಗೂಗಲ್, ಫೇಸ್‌ಬುಕ್ ಮತ್ತು ಯೂಟ್ಯೂಬ್ ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಸಭೆ ಕರೆದಿದೆ. ತಮ್ಮ ಸೈಟ್‌ಗಳಿಂದ ಡೀಪ್‌ಫೇಕ್‌ಗಳನ್ನು ತೆಗೆದು ಹಾಕದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಾಜೀವ್ ಚಂದ್ರಶೇಖರ್, ಡೀಪ್‌ಫೇಕ್ ಮತ್ತು ಸುಳ್ಳು ಮಾಹಿತಿಯನ್ನು ಸರ್ಕಾರ ಗಂಭೀರ ಬೆದರಿಕೆ ಎಂದು ಪರಿಗಣಿಸುತ್ತದೆ. ಡೀಪ್‌ಫೇಕ್‌ಗಳು ಭಾರತದ ಜನರ ಸುರಕ್ಷತೆಗೆ ಹೇಗೆ ಗಂಭೀರ ಅಪಾಯವನ್ನುಂಟುಮಾಡುತ್ತವೆ ಎಂಬುದನ್ನು ನಾವು ಎಲ್ಲಾ ವೇದಿಕೆಗಳಿಗೆ ವಿವರಿಸುತ್ತೇವೆ. ತಮ್ಮ ಸೈಟ್‌ಗಳಿಂದ ಡೀಪ್‌ಫೇಕ್‌ಗಳನ್ನು ತೆಗೆದುಹಾಕದಿದ್ದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಎಲ್ಲಾ ವೇದಿಕೆಗಳಿಗೆ ಎಚ್ಚರಿಕೆ ನೀಡಿದೆ.
ಎಲ್ಲಾ ಪ್ಲಾಟ್‌ಫಾರ್ಮ್‌ಗಳು ತಮ್ಮ ಸೈಟ್‌ಗಳಲ್ಲಿ ಪೋಸ್ಟ್ ಮಾಡಿದ ಡೀಪ್‌ಫೇಕ್‌ಗಳ ಮಾಹಿತಿಯನ್ನು ಸ್ವೀಕರಿಸಿದ 36 ಗಂಟೆಗಳ ಒಳಗೆ ತೆಗೆದುಹಾಕಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಭಾರಿ ದಂಡ ವಿಧಿಸಲಾಗುವುದು ಎಂದು ಸಚಿವ ರಾಜೀವ್ ಚಂದ್ರಶೇಖರ್ ಎಚ್ಚರಿಕೆ ಕೊಟ್ಟರು. ಅಂತಹ ವೇದಿಕೆಯ ವಿರುದ್ಧ ಯಾರು ಬೇಕಾದರೂ ನ್ಯಾಯಾಲಯದ ಮೊರೆ ಹೋಗಬಹುದು, ಭಾರತೀಯ ದಂಡ ಸಂಹಿತೆ ಅಥವಾ ಐಟಿ ಕಾಯಿದೆಯಡಿ ಅವರ ವಿರುದ್ಧ ದೂರು ದಾಖಲಿಸಬಹುದು ಎಂದರು.
ಡೀಪ್‌ಫೇಕ್ ಎಂದರೇನು?
* ಇದು ಕೃತಕ ತಂತ್ರವಾಗಿದ್ದು, ಒಬ್ಬ ವ್ಯಕ್ತಿಯ ಮುಖವನ್ನು ಇನ್ನೊಬ್ಬ ವ್ಯಕ್ತಿಯ ವೀಡಿಯೊಗೆ ಸೇರಿಸಲಾಗುತ್ತದೆ.
* ಡೀಪ್‌ಫೇಕ್ ವೀಡಿಯೊಗಳನ್ನು ರಚಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
* ಡೀಪ್‌ಫೇಕ್ ಯಾವುದೇ ಫೋಟೋ ಅಥವಾ ವೀಡಿಯೊವನ್ನು ಬೇರೆ ಯಾವುದನ್ನಾದರೂ ಬದಲಾಯಿಸುವ ಮೂಲಕ ನಕಲಿ ಮಾಡುತ್ತದೆ.