ಓಲಾ, ಊಬರ್‌ಗಳ ಬೇಕಾಬಿಟ್ಟಿ ವರ್ತನೆಗೆ ಸಚಿವಾಲಯ ಗರಂ, ಕಠಿಣ ಕ್ರಮದ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗ್ರಾಹಕರ ದೂರುಗಳನ್ನು ಪರಿಹರಿಸಲು ವಿಫಲವಾದಲ್ಲಿ ಹಾಗೂ ಪ್ರತಿ ರೈಡ್‌ಗೆ ಅಸಮಂಜಸವಾದ ರದ್ದತಿ ಶುಲ್ಕ, ವಿಮೆ ಮತ್ತು ಕೋವಿಡ್ -19 ಶುಲ್ಕಗಳನ್ನು ವಿಧಿಸುವಂತಹ ಅನ್ಯಾಯದ ಕೆಲಸವನ್ನು ಕೊನೆಗೊಳಿಸದಿದ್ದಲ್ಲಿ, ಆನ್‌ಲೈನ್ ಕ್ಯಾಬ್ ಅಗ್ರಿಗೇಟರ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಎಚ್ಚರಿಕೆ ನೀಡಿದೆ.

ಶೇಕಡಾ 30% ಕ್ಯಾಬ್‌ ಚಾಲಕರು ಬುಕ್‌ ಮಾಡಿದ ಬಳಿಕ ರೈಡ್‌ ಕ್ಯಾನ್ಸಲ್‌ ಮಾಡುವಂತೆ ಗ್ರಾಹಕರನ್ನು ಒತ್ತಾಯಿಸುವುದಾಗಿ ಅಗ್ರಿಗೇಟರ್‌ ಒಬ್ಬರು ಸಚಿವಾಲಯದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬುಕಿಂಗ್‌ ಆದ ನಂತರ ಚಾಲಕ ಹಾಗೂ ಗ್ರಾಹಕರ ನಡುವಿನ ಕರೆಯ ಪ್ರಮಾಣವನ್ನು ವಿಮರ್ಶಿಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ. ರೈಡ್‌ ಕ್ಯಾನ್ಸಲ್‌ ಮಾಡದಿದ್ದಲ್ಲಿ ಚಾಲಕರು ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಿಸುತ್ತಿದ್ದಾರೆ. ಗ್ರಾಹಕರು ತಮ್ಮ ತಪ್ಪಿಲ್ಲದಿದ್ದರೂ ರದ್ದತಿ ಶುಲ್ಕವನ್ನು ಪಾವತಿಬೇಕಾಗಿದೆ ಎಂದು ದೂರಿದ್ದಾರೆ. ಈ ಬಗ್ಗೆ ಹೆಚ್ಚಿನ ದೂರುಗಳನ್ನು ಸ್ವೀಕರಿಸಿರುವುದಾಗಿ ಸಚಿವಾಲಯ ತಿಳಿಸಿದೆ.

Uber, Ola, Meru Cabs, Rapido ಮತ್ತು Jugnoo ಜೊತೆಗೆ ಸಭೆ ನಡೆಸಿದ ಸಚಿವಾಲಯದ ಅಧಿಕಾರಿಗಳು ಆತಂಕಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ. ಬಂದಿರುವ ದೂರುಗಳಲ್ಲಿ 53% ರಿಂದ 61% ರಷ್ಟು ದೂರುಗಳು ಸೇವೆಯಲ್ಲಿನ ದೋಷಕ್ಕೆ ಸಂಬಂಧಿಸಿವೆ ಎಂದಿದ್ದಾರೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಡೇಟಾವನ್ನು ಉಲ್ಲೇಖಿಸಿದ ಅಧಿಕಾರಿಗಳು, ಪಾವತಿಸಿದ ಮೊತ್ತವನ್ನು ಮರುಪಾವತಿ ಮಾಡದಿರುವುದು ಮತ್ತು ಅನಧಿಕೃತ ಶುಲ್ಕಗಳನ್ನು ವಿಧಿಸುವುದು ಗ್ರಾಹಕರ ಪ್ರಮುಖ ದೂರುಗಳಾಗಿವೆ.

ಹೆಚ್ಚುತ್ತಿರುವ ಗ್ರಾಹಕರ ದೂರುಗಳ ಅಂಕಿಅಂಶಗಳನ್ನು ಕಂಪನಿ ಅಧಿಕಾರಿಗಳಿಗೆ ನೀಡಿದ್ದೇವೆ. ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಗ್ರಾಹಕರ ದೂರುಗಳನ್ನು ಪರಿಹರಿಸಲು ಸೂಚನೆ ನೀಡಿದ್ದೇವೆ. ಇಲ್ಲದಿದ್ದರೆ ಸಕ್ಷಮ ಪ್ರಾಧಿಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಕ್ಯಾಬ್ ಅಗ್ರಿಗೇಟರ್‌ಗಳು ತಕ್ಷಣವೇ ಪರಿಹಾರವನ್ನು ಸೂಚಿಸಬೇಕೆಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ (ಸಿಸಿಪಿಎ) ಮುಖ್ಯ ಆಯುಕ್ತ ನಿಧಿ ಖರೆ ಹೇಳಿದ್ದಾರೆ. ಪ್ರಯಾಣಿಕರ ಸಮಸ್ಯೆಯನ್ನು ಪರಿಹರಿಸಲು 24×7 ಸಹಾಯವಾಣಿ ಪ್ರಾರಂಭಿಸಬೇಕೆಂದು ಸಚಿವಾಲಯ ತಾಕೀತು ಮಾಡಿದೆ. ಸಚಿವಾಲಯದ ಆದೇಶದಂತೆ ಗ್ರಾಹಕರ ದೂರುಗಳನ್ನು ಪರಿಶೀಲಿಸುವುದಾಗಿ ಅಗ್ರಿಗೇಟರ್‌ಗಳು ಭರವಸೆ ನೀಡಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!