ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಲಿಚ್ಟೆನ್ಸ್ಟೈನ್ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಲಿಕ್ಟೆನ್ಸ್ಟೈನ್ ದೇಶದ ರಾಜಕುಮಾರ ಅಲೋಯಿಸ್ ಮತ್ತು ರಾಜಕುಮಾರಿ ಸೋಫಿ ಅವರು ಭಾರತಕ್ಕೆ ನೀಡಿರುವ ಮೊದಲ ಅಧಿಕೃತ ಭೇಟಿಯ ಅಂಗವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ರಾಷ್ಟ್ರಪತಿ ಭವನದಲ್ಲಿ ಅದ್ಧೂರಿ ಸ್ವಾಗತ
ಇದಕ್ಕೂ ಮುನ್ನ ದೆಹಲಿಗೆ ಆಗಮಿಸಿದ ರಾಜಕುಮಾರ ಅಲೋಯಿಸ್ ಮತ್ತು ರಾಜಕುಮಾರಿ ಸೋಫಿ ದಂಪತಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ಅವರು ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ರಾಜಮನೆತನದ ದಂಪತಿಯು ರಾಜ್ಘಾಟ್ಗೆ ಭೇಟಿ ನೀಡಿ, ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪಗುಚ್ಛ ಇಟ್ಟು ಗೌರವ ನಮನ ಸಲ್ಲಿಸಿದರು ಹಾಗೂ ಅಲ್ಲಿನ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಜಯಂತ್ ಚೌಧರಿ ಉಪಸ್ಥಿತರಿದ್ದರು.
ವ್ಯಾಪಾರ ಮತ್ತು ತಂತ್ರಜ್ಞಾನ ವೃದ್ಧಿಗೆ ಒತ್ತು
ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೂ ಸಹ ರಾಜಕುಮಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಒಂದು ವರ್ಷದ ಹಿಂದೆ ಜಾರಿಗೆ ಬಂದ ಭಾರತ ಮತ್ತು ಇಎಫ್ಟಿಎ (EFTA TEPA) ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ನಂತರ ಎರಡೂ ದೇಶಗಳ ನಡುವಿನ ಆರ್ಥಿಕ ಬಾಂಧವ್ಯಕ್ಕೆ ಭಾರೀ ವೇಗ ಸಿಕ್ಕಿದೆ ಎಂದು ಜೈಶಂಕರ್ ತಿಳಿಸಿದರು.
ಇದನ್ನೂ ಓದಿ:
ಭಾರತದ ಪ್ರವಾಸದ ಕುರಿತು ಮಾತನಾಡಿದ ರಾಜಕುಮಾರ ಅಲೋಯಿಸ್ ಅವರು, “ಭಾರತದೊಂದಿಗಿನ ಈ ಮೊದಲ ಐತಿಹಾಸಿಕ ಭೇಟಿಯು ನಮಗೆ ಅತ್ಯಂತ ಗೌರವ ತಂದಿದೆ. ನಾವೀನ್ಯತೆ, ಸುಧಾರಿತ ಉತ್ಪಾದನೆ, ಹಣಕಾಸು ಸೇವೆಗಳು, ಶಿಕ್ಷಣ ಮತ್ತು ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಮತ್ತು ಲಿಚ್ಟೆನ್ಸ್ಟೈನ್ ದೇಶಗಳು ಒಟ್ಟಾಗಿ ಕೆಲಸ ಮಾಡಲು ಅಪಾರ ಅವಕಾಶಗಳಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬೈ ಮತ್ತು ವಡೋದರಾ ಪ್ರವಾಸ ಮುಗಿಸಿ ದೆಹಲಿಗೆ ಬಂದಿರುವ ಈ ಉನ್ನತ ಮಟ್ಟದ ರಾಜತಾಂತ್ರಿಕ ಹಾಗೂ ಉದ್ಯಮಿಗಳ ನಿಯೋಗವು ಬುಧವಾರ ಭಾರತದಿಂದ ನಿರ್ಗಮಿಸಲಿದೆ.



