August 27, 2026
Thursday, August 27, 2026
spot_img

72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್: ಕ್ರೀಡಾಪಟುಗಳಿಗೆ ಭರ್ಜರಿ ಅವಕಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ವಿವಿಧ ಇಲಾಖೆಗಳ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಕ್ರೀಡಾಪಟುಗಳಿಗೆ ಮೀಸಲಾತಿ ಹಾಗೂ ಪ್ರೋತ್ಸಾಹಧನದ ಹಲವು ಹೊಸ ಯೋಜನೆಗಳನ್ನೂ ಸರ್ಕಾರ ಘೋಷಿಸಿದೆ.

72 ಸಾವಿರ ಹುದ್ದೆಗಳ ನೇಮಕಾತಿಗೆ ಚಾಲನೆ

ಹಣಕಾಸು ಇಲಾಖೆಯ ಅನುಮೋದನೆಯೊಂದಿಗೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 72,000 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರದಲ್ಲೇ ಸಂಬಂಧಿತ ಇಲಾಖೆಗಳು ನೇಮಕಾತಿ ಅಧಿಸೂಚನೆ ಪ್ರಕಟಿಸಲಿದ್ದು, ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಲಿದೆ.

ಇದನ್ನೂ ಓದಿ:

ಕ್ರೀಡಾಪಟುಗಳಿಗೆ ಮೀಸಲು, ಉದ್ಯೋಗಕ್ಕೆ ಆದ್ಯತೆ

ಸರ್ಕಾರ ಈ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಆದ್ಯತೆ ನೀಡಿದೆ. ಸಾಮಾನ್ಯ ಇಲಾಖೆಗಳ ನೇಮಕಾತಿಯಲ್ಲಿ 2% ಹಾಗೂ ಪೊಲೀಸ್ ಇಲಾಖೆಯಲ್ಲಿ 3% ಹುದ್ದೆಗಳನ್ನು ಕ್ರೀಡಾ ಕೋಟಾದಡಿ ಮೀಸಲಿಡಲಾಗಿದ್ದು, ಸುಮಾರು 2,000 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಕ್ರೀಡಾ ಸಾಧನೆ ಮಾಡಿದ ಯುವಕರಿಗೆ ಉದ್ಯೋಗದಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಬಹುಮಾನ, ಪ್ರೋತ್ಸಾಹಧನ ಮತ್ತು ಹೊಸ ಕೋಚ್‌ಗಳ ನೇಮಕ

ರಾಜ್ಯವನ್ನು ಪ್ರತಿನಿಧಿಸಿ ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ₹5 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ. ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರಿಗೆ ಕ್ರಮವಾಗಿ ₹35 ಲಕ್ಷ, ₹25 ಲಕ್ಷ ಹಾಗೂ ₹15 ಲಕ್ಷ ನಗದು ಬಹುಮಾನ ನೀಡುವ ಯೋಜನೆ ಮುಂದುವರಿಯಲಿದೆ. ಜೊತೆಗೆ ರಾಜ್ಯದಲ್ಲಿ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ಉದ್ದೇಶದಿಂದ 50 ಹೊಸ ಕೋಚ್‌ಗಳ ನೇಮಕಕ್ಕೂ ಸರ್ಕಾರ ಮುಂದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !