September 24, 2026
Thursday, September 24, 2026
spot_img

ನಂದಿನಿ ಹಾಲಿನ ದರ ಏರಿಕೆಗೆ ಗ್ರೀನ್ ಸಿಗ್ನಲ್?: ಲೀಟರ್‌ಗೆ 4-5 ರೂ. ದುಬಾರಿ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಹೌದು! ರಾಜ್ಯ ಸರ್ಕಾರ ಇದೀಗ ನಂದಿನಿ ಹಾಲಿನ ದರ ಏರಿಕೆ ಮಾಡಲು ಮುಂದಾಗಿದೆ.

ಹಾಲು ಉತ್ಪಾದಕರ ಒಕ್ಕೂಟಗಳ ಬೇಡಿಕೆ ಹಿನ್ನೆಲೆಯಲ್ಲಿ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 4ರಿಂದ 5 ರೂ ವರೆಗೆ ಹೆಚ್ಚಿಸಲು ಸರ್ಕಾರ ಸಮ್ಮತಿಸಿದೆ ಎಂಬ ವರದಿಗಳು ಹೊರಬಿದ್ದಿವೆ. ಆದರೆ ಈ ಕುರಿತು ಅಧಿಕೃತ ಆದೇಶ ಇನ್ನೂ ಹೊರಬಿದ್ದಿಲ್ಲ. ದರ ಪರಿಷ್ಕರಣೆ ಜಾರಿಯಾದರೆ ಪ್ರಸ್ತುತ 46 ರೂ ಇರುವ ನಂದಿನಿ ಹಾಲಿನ ದರ 50 ರೂ ಅಥವಾ 51 ರೂ ಏರಿಕೆಯಾಗುವ ಸಾಧ್ಯತೆಯಿದೆ.

10 ರೂ ಹೆಚ್ಚಳಕ್ಕೆ ಬೇಡಿಕೆ

ರಾಜ್ಯದ 16 ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಗಳು ಹಾಲಿನ ಮಾರಾಟ ದರವನ್ನು ಲೀಟರ್‌ಗೆ 8ರಿಂದ 10ರವರೆಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದವು. ಹಾಲು ಉತ್ಪಾದನಾ ವೆಚ್ಚ, ಪಶು ಆಹಾರ, ಮೇವು, ಪಶುವೈದ್ಯಕೀಯ ಸೇವೆ, ಸಂಸ್ಕರಣೆ, ಪ್ಯಾಕೇಜಿಂಗ್ ಹಾಗೂ ಸಾಗಣೆ ವೆಚ್ಚ ಹೆಚ್ಚಳದಿಂದ ರೈತರು ಮತ್ತು ಹಾಲು ಒಕ್ಕೂಟಗಳು ಸಂಕಷ್ಟದಲ್ಲಿವೆ ಎಂದು ಒಕ್ಕೂಟಗಳ ಪ್ರತಿನಿಧಿಗಳು ವಾದಿಸಿದ್ದರು.

ಸೆಪ್ಟೆಂಬರ್ 22ರಂದು ಹಾಲು ಒಕ್ಕೂಟಗಳ ನಿಯೋಗ ಮುಖ್ಯಮಂತ್ರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ದರ ಪರಿಷ್ಕರಣೆಗೆ ಮನವಿ ಸಲ್ಲಿಸಿತ್ತು. ಕಳೆದ 10 ವರ್ಷಗಳಲ್ಲಿ ಪಶು ಆಹಾರದ ಬೆಲೆ ಏರಿಕೆ, ಹಾಲು ಉತ್ಪಾದನಾ ವೆಚ್ಚ, ಖರೀದಿ ಪ್ರಮಾಣ ಹಾಗೂ ನೆರೆಯ ರಾಜ್ಯಗಳ ಹಾಲಿನ ದರಗಳ ಕುರಿತ ಸಮಗ್ರ ಮಾಹಿತಿಯನ್ನು ಸಲ್ಲಿಸುವಂತೆ ಸಿಎಂ ಸೂಚಿಸಿದ್ದರು.

ಅಧಿಕೃತ ಆದೇಶ ಹೊರಬಿದ್ದ ಬಳಿಕವಷ್ಟೇ ನಿಖರ ದರ ಮತ್ತು ಜಾರಿಗೆ ಬರುವ ದಿನಾಂಕ ಸ್ಪಷ್ಟವಾಗಲಿದೆ. ದರ ಏರಿಕೆಯಾದರೆ ಹಾಲಿನ ಜೊತೆಗೆ ಹಾಲಿನಿಂದ ತಯಾರಿಸುವ ಮೊಸರು, ಸಿಹಿತಿಂಡಿ ಹಾಗೂ ಇತರ ಉತ್ಪನ್ನಗಳ ಬೆಲೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Must Read