ಹೊಸದಿಗಂತ ವರದಿ, ಮಂಗಳೂರು:
ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಬೇಕಾದ ಮಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಎಲ್ಲವೂ ಸರಿಯಿಲ್ಲ! ಇಲ್ಲಿನ ಮಹಿಳಾ ಪೊಲೀಸ್ ಠಾಣೆಯ ಬಗ್ಗೆ ಆಗಾಗ ದೂರುಗಳು ಕೇಳಿ ಬರುತ್ತಿದ್ದು, ಇಲ್ಲಿ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಮೇರೆ ಮೀರಿರುವುದರಿಂದ ಇಲ್ಲಿದ್ದ ಅಧಿಕಾರಿಗಳು ಸೇರಿದಂತೆ ಎಲ್ಲಾ 32 ಮಂದಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಅಮಾನತುಗೊಂಡಿರುವ ಆರು ಮಂದಿ ಕೂಡ ಸೇರಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು, ಹೊಸ ತಂಡವನ್ನು ಮಹಿಳಾ ಪೊಲೀಸ್‌ಠಾಣೆಗೆ ನಿಯೋಜಿಸಲಾಗಿದೆ.
ಠಾಣೆಗೆ ಇಬ್ಬರು ಪಿಎಸ್‌ಐ, ಒಬ್ಬರು ಎಚ್‌ಸಿ ಹಾಗೂ 16 ಪಿಸಿಗಳು ಸೇರಿ 20 ಮಂದಿಯ ಹೊಸ ತಂಡವನ್ನು ನೇಮಕ ಮಾಡಲಾಗಿದೆ. ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರೇವತಿ ರವರಿಗೆ ಅಪಘಾತವಾಗಿದ್ದು, 2 ತಿಂಗಳ ಕಾಲ ವಿಶ್ರಾಂತಿ ಅಗತ್ಯವಿರುವ ಕಾರಣ ಸಿಸಿಆರ್‌ಬಿ ವಿಭಾಗದ ಪೊಲೀಸ್ ನಿರೀಕ್ಷಕರಾದ ಸಿದ್ಧನಗೌಡ ಎಚ್.ಬಜಂತ್ರಿ ಅವರಿಗೆ ಮಹಿಳಾ ಪೊಲೀಸ್ ಠಾಣೆಯ ಹೆಚ್ಚುವರಿ ಪ್ರಭಾರವನ್ನು ವಹಿಸಲಾಗಿದೆ. ಮಹಿಳಾ ಠಾಣೆಗೆ ಇನ್ನೂ 12 ಜನ ಸಿಬ್ಬಂದಿ ಅಗತ್ಯವಿದ್ದು, ಕೌಶಲ್ಯವನ್ನು ಆಧರಿಸಿ ನೇಮಕಕ್ಕೆ ಕ್ರಮ ವಹಿಸಲಾಗುವುದು. ಪ್ರಸ್ತುತ ಡಿಸಿಪಿ ಹಾಗೂ ಎಸಿಪಿಗಳು ಠಾಣೆಯ ಮೇಲುಸ್ತುವಾರಿ ನೋಡಲಿದ್ದು, ದಿನಂಪ್ರತಿ ಅಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.