Saturday, December 9, 2023

Latest Posts

ಅರ್ಬುದನೆಂದೆಂಬ ವ್ಯಾಘ್ರನು…| ಭಾರತವನ್ನಾವರಿಸುತ್ತಿರುವ ಕ್ಯಾನ್ಸರ್ ಮಾರಿಯ ಕಳವಳದ ಕತೆ

 

ಚೈತನ್ಯ ಹೆಗಡೆ

ಆಗಸ್ಟ್ 24ರಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬಿನಲ್ಲಿ ರು.660 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಟಾಟಾ ಮೆಮೊರಿಯಲ್- ಹೋಮಿ ಭಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಅಧ್ಯಯನ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು. ಉತ್ತರದ ಹಲವು ರಾಜ್ಯಗಳ ಜನ ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಚಿಕಿತ್ಸೆ ಪಡೆಯುವುದಕ್ಕೆ ಅನುಕೂಲವಾಗುವ, ಕಿಮೋದಿಂದ ಹಿಡಿದು ಅಸ್ಥಿ ಮಜ್ಜೆ ಚಿಕಿತ್ಸೆವರೆಗೆ ಎಲ್ಲವನ್ನೂ ಮಾಡಬಲ್ಲ ಜಾಗತಿಕ ದರ್ಜೆಯ ಸುಸಜ್ಜಿತ ಆಸ್ಪತ್ರೆ ಇದು. ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತ ಹೇಳಿದ ಹಲವು ಸಂಗತಿಗಳಲ್ಲಿ ಮುಖ್ಯವಾದ ಅಂಶಗಳೆಂದರೆ- 2014ರಲ್ಲಿ ಎನ್ ಡಿ ಎ ಸರ್ಕಾರ ಬಂದ ನಂತರ ದೇಶಾದ್ಯಂತ ಕ್ಯಾನ್ಸರ್ ರೋಗಪತ್ತೆ ಮತ್ತು ಆರಂಭಿಕ ಚಿಕಿತ್ಸೆಗಳಿಗೆಂದು ಸುಮಾರು 40 ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಅಂತೆಯೇ, ಸರ್ಕಾರ ಕೇವಲ ಆಸ್ಪತ್ರೆಗಳನ್ನು  ಕಟ್ಟುತ್ತಿಲ್ಲ, ಜನರ ವರ್ತನೆಗಳನ್ನು ಬದಲಿಸುವ ಮತ್ತು ಪೌಷ್ಟಿಕ ಆಹಾರ ಹಾಗೂ ಉತ್ತಮ ಜೀವನಕ್ರಮಗಳತ್ತ ಹೊರಳಿ ರೋಗವೇ ಬರದಂತೆ ಮಾಡುವ ಹಲವು ಉಪಕ್ರಮಗಳನ್ನು ಕೈಗೊಂಡಿದೆ.

ಪ್ರಧಾನಿ ಮಾತಿನಲ್ಲಿ ವ್ಯಕ್ತವಾದ ಈ ಎರಡು ಅಂಶಗಳಲ್ಲಿ, ಎರಡನೆಯ ಅಂಶ ಹೆಚ್ಚು ಬಲಗೊಳ್ಳಲಿ ಎಂದು ಜನ ಆಶಿಸಬೇಕಿದೆ. ಏಕೆಂದರೆ, ಅಗತ್ಯಕ್ಕೆ ತಕ್ಕಂತೆ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನೆಗಳಿಗೆ ಸರ್ಕಾರವು ಸಂಸ್ಥೆಗಳನ್ನು ಕಟ್ಟುತ್ತಿರುವುದು ಸಮಾಧಾನಕರ ಸಂಗತಿಯೇ ಆದರೂ, ಅದೇಕೆ ಈ ರೋಗ ಪರಿಪರಿಯಾಗಿ ಆಕ್ರಮಿಸಿಕೊಳ್ಳುತ್ತಿದೆ ಎಂಬುದಂತೂ ಯೋಚಿಸಬೇಕಾದ ವಿಷಯ.

ಅರ್ಬುದ ರೋಗದ ಅಬ್ಬರ

ಭಾರತೀಯ ವೈದ್ಯ ಸಂಶೋಧನೆ ಸಂಸ್ಥೆ (ಐ ಸಿ ಎಂ ಆರ್) ಮೇ 2022ರಲ್ಲಿ ನೀಡಿರುವ ವರದಿಯ ಪ್ರಕಾರ, ಭಾರತದಲ್ಲಿ 2021ರ ವೇಳೆಗೆ 2.6 ಕೋಟಿ ಕ್ಯಾನ್ಸರ್ ಪೀಡಿತರಿದ್ದಾರೆ ಹಾಗೂ ಈ ಸಂಖ್ಯೆ 2025ರಲ್ಲಿ ಹತ್ತಿರ ಹತ್ತಿರ 3 ಕೋಟಿಯನ್ನು (2.9 ಕೋಟಿ) ಮುಟ್ಟಲಿದೆ.

ಪುಪ್ಪುಸದ ಕ್ಯಾನ್ಸರ್ ಅಗ್ರಸ್ಥಾನದಲ್ಲಿದ್ದು, ಬಾಯಿ, ಕರುಳು, ಸ್ತನ ಕ್ಯಾನ್ಸರುಗಳು ವ್ಯಾಪಕವಾಗಿವೆ.

ಈ ಅಂಕಿಸಂಖ್ಯೆಗಳ ಹೊರತಾಗಿಯೂ, ಈ ವರದಿ ಓದುತ್ತಿರುವ ಅನೇಕರಿಗೆ, ನಿಮ್ಮ ಅಕ್ಕಪಕ್ಕದಲ್ಲೇ ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ಕೇಳಿಬರುತ್ತಿರುವುದು ಅನುಭವಕ್ಕೆ ಬಂದಿದ್ದಿರಬಹುದು.

ಸಂಸ್ಕರಿತ ಆಹಾರದ ಮೇಲೆಯೇ ಹೆಚ್ಚಿನ ಗುಮಾನಿ, ದೋಷ

ಐ ಸಿ ಎಂ ಆರ್ ನ ಇದೇ ಅಧ್ಯಯನ ವರದಿಯು ವ್ಯಾಪಕವಾಗುತ್ತಿರುವ ಕ್ಯಾನ್ಸರ್ ರೋಗಕ್ಕೆ ಕಾರಣವೇನು ಎಂಬುದನ್ನೂ ವಿಶ್ಲೇಷಿಸಿದೆ. ಅದರ ಈ ಸಾಲುಗಳು ಗಮನಾರ್ಹ- “ಮೊದಲೆಲ್ಲ ತಂಬಾಕು ಮತ್ತು ಆಲ್ಕೊಹಾಲ್ ಸೇವನೆಯೇ ಕ್ಯಾನ್ಸರ್ ಕೋಶಗಳು ಹುಟ್ಟುವುದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿತ್ತು. ಆದರೀಗ ಪೊಟ್ಟಣಗಳಲ್ಲಿ ಮಾರಾಟವಾಗುವ ಸಂಸ್ಕರಿತ ಆಹಾರಗಳ ವ್ಯಾಪಕ ಸೇವನೆ ಕ್ಯಾನ್ಸರ್ ಗೆ ಪ್ರಮುಖ ಕಾರಣವಾಗುತ್ತಿದೆ.”

ಹಾಗಂತ ಇದೊಂದೇ ಕಾರಣ ಅಂತಲ್ಲ. ಆದರೆ ಈಗ ಸ್ಥಿತಿವಂತರು-ಆರ್ಥಿಕವಾಗಿ ಕೆಳಹಂತದವರು ಎಂಬ ಬೇಧವಿಲ್ಲದೇ ದೊಡ್ಡ ಮತ್ತು ಚಿಕ್ಕ ಪ್ಯಾಕುಗಳಲ್ಲಿ ಬರುವ ಸಂಸ್ಕರಿತ ಆಹಾರ, ಜಂಕ್ ತಿನಿಸುಗಳನ್ನು ಸೇವಿಸುವುದು ಸಾಮಾನ್ಯ ಎಂಬಂತಾಗಿದೆ. ಈ ತಿನಿಸುಗಳು ಸುದೀರ್ಘ ಕಾಲ ಕೆಡದೇ ಇರುವಂತೆ ಬಳಸಲಾಗುವ ರಾಸಾಯನಿಕಗಳೇ ಕ್ಯಾನ್ಸರಿಗೆ ದೊಡ್ಡಮಟ್ಟದ ಕೊಡುಗೆ ಕೊಡುತ್ತಿವೆ.

ಇನ್ನುಳಿದಂತೆ, ಬೊಜ್ಜು, ಮೊಬೈಲ್ ಟವರುಗಳು ಸೂಸುವ ವಿಕಿರಣ, ಕೈಗಾರಿಕೆಗಳ ತ್ಯಾಜ್ಯವು ಸೇರುವ ನದಿ ನೀರನ್ನೇ ಬಳಸಿ ಬೆಳೆದ ತರಕಾರಿಗಳು, ತಿನಿಸುಗಳು ಚೆಂದ ಕಾಣಲೆಂದು ಬಳಸುವ ಬಣ್ಣ ಇವೆಲ್ಲವೂ ವ್ಯಕ್ತಿಯೊಬ್ಬನ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುವುದಕ್ಕೆ ತಮ್ಮ ತಮ್ಮ ಕೊಡುಗೆ ಕೊಡುತ್ತ ಹೋಗುತ್ತವೆ.

ಒಂದು ವಿರೋಧಾಭಾಸ?

ಪ್ರಧಾನಿ ಮೋದಿ ಹೇಳಿದಂತೆ ಅದಾಗಲೇ ಅವತರಿಸಿಬಿಟ್ಟಿರುವ ರೋಗದ ಚಿಕಿತ್ಸೆಗೆ ತಕ್ಕ ಆಸ್ಪತ್ರೆಗಳನ್ನು ರೂಪಿಸುವುದು ಅನಿವಾರ್ಯ. ಆದರೆ ರೋಗಗಳು ಬರದಂತೆ ತಡೆಯುವ ನಿಟ್ಟಿನಲ್ಲಿ ಅನುಸರಿಸಬಹುದಾದ ಜೀವನಶೈಲಿಯೇ ಕ್ಯಾನ್ಸರ್ ಮಾರಿ ಬೃಹತ್ ಆಗದಂತೆ ತಡೆಯುವ ಮದ್ದು ಎಂಬುದಂತೂ ತಾರ್ಕಿಕವೇ.

ಇವೆಲ್ಲ ಹೇಳುತ್ತಲೇ ಸರ್ಕಾರ, ಸಮಾಜ, ಹಾಗೂ ವೈಯಕ್ತಿಕ ನೆಲೆಯಲ್ಲಿ ಸಹ ಆಹಾರ ಸಂಸ್ಕರಣೆ ಉದ್ಯಮವು ಬೆಳೆಯುವುದನ್ನು ನಾವು ಆರ್ಥಿಕ ಉನ್ನತಿಯ ಭಾಗವಾಗಿ ನೋಡುತ್ತಿದ್ದೇವೆ. ಫುಡ್ ಪ್ರಾಸೆಸಿಂಗ್ ಅನ್ನೋದು ಭಾರತದಲ್ಲಿ ಏರುಗತಿಯಲ್ಲಿರುವ ಉದ್ಯಮ. ಇದು ಬೆಳೆದವರಿಗೆ ಹೆಚ್ಚಿನ ಮೌಲ್ಯ ತಂದುಕೊಡುವ ಮಾರ್ಗವಾಗಿ ಈ ಕ್ಷಣದಲ್ಲಿ ಕಂಡರೂ, ಸಂಸ್ಕರಿತ ಆಹಾರ ಎಂದರೆ ಹೆಚ್ಚಿನದಾಗಿ ಮತ್ತದೇ ಕೆಡದಂತಿಡುವ ರಾಸಾಯನಿಕಗಳ ಪ್ರಯೋಗವೇ ತಾನೇ?

ಬೆಳೆದ ಆಹಾರದ ಚಿಕ್ಕದೊಂದು ಭಾಗವನ್ನು ಹುಳು ತಿನ್ನುವುದು ನಿಸರ್ಗ ವ್ಯವಸ್ಥೆಯ ಭಾಗವೇ ಆಗಿದ್ದಿರಬಹುದು. ಮನುಷ್ಯ ಅದನ್ನು ತಪ್ಪಿಸಿ, ಹೆಚ್ಚು ಆಹಾರ ಉಳಿಸಿ, ಅದನ್ನು ಹೆಚ್ಚು ಕಾಲ ಬಳಸುವ ಉತ್ಪನ್ನವಾಗಿಸಿ ಬೀಗುತ್ತಿರುವಾಗಲೇ, ಮುಂದೊಂದು ದಿನ ಈ ಹಿಂದೆ ಹುಳುಗಳು ತಪ್ಪಿಸಿಕೊಂಡಿದ್ದನ್ನು ಮತ್ಯಾವುದೋ ಸೂಕ್ಷ್ಮ ಜೀವಿಗಳು ನಮ್ಮ ದೇಹದಲ್ಲೇ ಸೇರಿಕೊಂಡು ನಮ್ಮ ಕೋಶಗಳನ್ನೇ ತಿಂದು ಲೆಕ್ಕ ಚುಕ್ತಾ ಮಾಡುತ್ತಿವೆಯೇ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!