ಹೊಸದಿಗಂತ ವರದಿ ಬೆಂಗಳೂರು:
ಜೂನ್ 27ಕ್ಕೆ ಬೆಂಗಳೂರಿನಲ್ಲಿ ಹಸಿರು ಕ್ರಾಂತಿಗೆ ಸಿದ್ಧತೆ ನಡೆಯುತ್ತಿದ್ದು, 12 ತಾಸು, 250 ಎಕರೆ ಪ್ರದೇಶ, 50 ಸಾವಿರ ಜನ 15 ಲಕ್ಷ ಗಿಡ ನೆಡಲು ಸಜ್ಜಾಗಿದ್ದಾರೆ. ಆ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಐದು ನಗರ ಪಾಲಿಕೆಗಳು, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ, ಬೆಂಗಳೂರು ನಗರ ಪುನಶ್ಚೇತನ ಮಿಷನ್ 2026-30 ರ ಅಂಗವಾಗಿ, ನಾಡಪ್ರಭು ಕೆಂಪೇಗೌಡರ ದಿನಾಚರಣೆಯ ಪ್ರಯುಕ್ತ ಜೂನ್ 27ರಂದು ನಗರದ ವಿವಿಧ ಭಾಗಗಳಲ್ಲಿ, 15 ಲಕ್ಷ ಸ್ಥಳೀಯ ತಳಿ ಸಸಿಗಳನ್ನು ನೆಡುವ ಬೃಹತ್ ಅಭಿಯಾನ ಆಯೋಜಿಸಲಾಗಿದೆ. ಈ ಸಂಬಂಧ ಜಿಬಿಎ ಮುಖ್ಯ ಕಚೇರಿಯಲ್ಲಿ ಈಗಾಗಲೇ ಸಭೆ ನಡೆಸಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕಾರ್ಯಕ್ರಮಕ್ಕೆ ಅಗತ್ಯವಿರುವ ಸಸಿಗಳು, ಉಪಕರಣಗಳು, ಮಾರ್ಗಸೂಚಿ ಫಲಕಗಳು ಹಾಗೂ ಇತರೆ ಸಾಮಗ್ರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಂಡು, ಪ್ರತಿಯೊಂದು ಹಂತದಲ್ಲೂ ಸಾಮಾಜಿಕ ಮೇಲ್ವಿಚಾರಣೆ ಹಾಗೂ ಪರಿಣಾಮಕಾರಿ ಸಮನ್ವಯ ಇರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿವಿಧ ಪರಿಸರ ವಲಯಗಳಲ್ಲಿ ಸಸಿ ನೆಡುವ ಕಾರ್ಯ:
ಈ ಅಭಿಯಾನವು ನಗರದ ಹಸಿರು ವಿಸ್ತರಣೆಗೆ ಮಹತ್ವದ ಕೊಡುಗೆ ನೀಡಲಿದ್ದು, ಡಾ. ಶಿವರಾಮ ಕಾರಂತ ಬಡಾವಣೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತ, ಕೆರೆ ದಂಡೆಗಳು, ರಾಜಕಾಲುವೆಗಳ ಇಕ್ಕೆಲಗಳು, ಉದ್ಯಾನವನಗಳು ಹಾಗೂ ವಿವಿಧ ಪರಿಸರ ವಲಯಗಳಲ್ಲಿ ಸಸಿ ನೆಡುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಅಧಿಕೃತ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು. ಜೊತೆಗೆ ಹಸಿರು ಬೆಂಗಳೂರಿನ ರೂವಾರಿಗಳು ಎಂಬ ಗೌರವ ಸಿಗಲಿದೆ. ಅತ್ಯುತ್ತಮ ಕೊಡುಗೆ ನೀಡುವವರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳಿಂದ ಗೌರವಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಕಲ ಸೌಲಭ್ಯ ಇರಲಿದೆ:
ಒಟ್ಟು 243 ಎಕರೆ ಪ್ರದೇಶವನ್ನು 49 ವಲಯಗಳಾಗಿ ಹಾಗೂ 314 ಸಸಿ ನೆಡುವ ಸ್ಥಳಗಳಾಗಿ ವಿಭಜಿಸಲಾಗಿ, ಪ್ರತಿಯೊಂದು ವಲಯಕ್ಕೂ ಒಬ್ಬ ವಲಯ ಕಮಾಂಡರ್ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ದಿನ ಸುಗಮ ಸಂಚಾರಕ್ಕಾಗಿ ಮೆಟ್ರೋ, ರೈಲುಗಳ ಸಂಚಾರ ಆವೃತ್ತಿಯನ್ನು ಹೆಚ್ಚಿಸಲಾಗುವುದು. ಜೊತೆಗೆ ಮೆಟ್ರೋ ನಿಲ್ದಾಣಗಳಿಂದ ಸಸಿ ನೆಡುವ ಸ್ಥಳಗಳವರೆಗೆ ಉಚಿತ ಬಸ್ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಆಹಾರ, ಪೋರ್ಟಬಲ್ ಶೌಚಾಲಯಗಳು ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು. ನಾಡಪ್ರಭು ಕೆಂಪೇಗೌಡರ ದಿನಾಚರಣೆಯ ಅಂಗವಾಗಿ ಜೂನ್ 27 ರಂದು ಬೆಳಗ್ಗೆ 6 ಗಂಟೆಗೆ 10ಕಿ ಹಾಗೂ 5ಕಿ ಮ್ಯಾರಾಥಾನ್ ಸಹ ಆಯೋಜಿಸಲಾಗಿದೆ. ಇದು ಎಂವಿಐಆರ್‌ನಿಂದ ಚಿಕ್ಕಘಟ್ಟ ಮೆಟ್ರೋ ನಿಲ್ದಾಣದವರೆಗೆ ನಡೆಯಲಿದೆ ಎಂದು ಬಿಡಿಎ ಆಯುಕ್ತ ಪಿ.ಮಣಿವಣ್ಣನ್ ತಿಳಿಸಿದರು.



