ಸುಂದರವಾದ, ದಟ್ಟವಾದ ಮತ್ತು ಹೊಳೆಯುವ ಕೂದಲು ಎಲ್ಲರ ಆಕರ್ಷಣೆಯ ಕೇಂದ್ರಬಿಂದು. ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದು ನಮ್ಮ ದೇಶದಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಒಂದು ಸಾಂಪ್ರದಾಯಿಕ ಪದ್ಧತಿ. ಆದರೆ ಇಂದಿನ ಆಧುನಿಕ ಜೀವನಶೈಲಿ, ಹೆಚ್ಚುತ್ತಿರುವ ಧೂಳು ಮತ್ತು ಮಾಲಿನ್ಯದ ನಡುವೆ ಪ್ರತಿದಿನ ಕೂದಲಿಗೆ ಎಣ್ಣೆ ಹಚ್ಚುವುದು ನಿಜಕ್ಕೂ ಒಳ್ಳೆಯದೇ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.
ತಲೆಯ ಚರ್ಮದ ನೈಸರ್ಗಿಕ ಪ್ರಕ್ರಿಯೆ
ನಮ್ಮ ತಲೆಯ ಚರ್ಮದಲ್ಲಿ (Scalp) ‘ಸೆಬಾಸಿಯಸ್ ಗ್ರಂಥಿಗಳು’ ಇರುತ್ತವೆ. ಇವು ನೈಸರ್ಗಿಕವಾಗಿ ‘ಸೆಬಮ್’ (Sebum) ಎಂಬ ಜಿಡ್ಡಿನ ಅಂಶವನ್ನು ಉತ್ಪತ್ತಿ ಮಾಡುತ್ತವೆ. ಈ ಸೆಬಮ್ ಕೂದಲಿಗೆ ನೈಸರ್ಗಿಕ ತೇವಾಂಶ ಮತ್ತು ರಕ್ಷಣೆಯನ್ನು ನೀಡುತ್ತದೆ. ನಾವು ಪ್ರತಿದಿನ ಹೊರಗಿನಿಂದ ಅತಿಯಾಗಿ ಎಣ್ಣೆಯನ್ನು ಹಚ್ಚಿದಾಗ, ತಲೆಯಲ್ಲಿ ಜಿಡ್ಡಿನ ಪ್ರಮಾಣ ದುಪ್ಪಟ್ಟಾಗಿ ತೊಂದರೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.
ಪ್ರತಿದಿನ ಎಣ್ಣೆ ಹಚ್ಚುವುದರಿಂದಾಗುವ ಪ್ರಮುಖ ತೊಂದರೆಗಳು:
ಹೆಚ್ಚುವರಿ ಕೊಳೆ ಮತ್ತು ಧೂಳು ಜಮೆಯಾಗುವುದು:
ದಿನಾಲೂ ಎಣ್ಣೆ ಹಚ್ಚಿ ಹೊರಗಡೆ ಹೋದಾಗ, ಗಾಳಿಯಲ್ಲಿರುವ ಧೂಳು ಮತ್ತು ಮಾಲಿನ್ಯವು ಸುಲಭವಾಗಿ ಕೂದಲಿಗೆ ಅಂಟಿಕೊಳ್ಳುತ್ತದೆ. ಇದು ತಲೆಯ ಚರ್ಮದ ರಂಧ್ರಗಳನ್ನು ಮುಚ್ಚಿಬಿಡುತ್ತದೆ.
ತೀವ್ರವಾದ ಹೊಟ್ಟು:
ನಮ್ಮ ತಲೆಯಲ್ಲಿ ನೈಸರ್ಗಿಕವಾಗಿ ಇರುವ ‘ಮಲಾಸೆಜಿಯಾ’ ಎಂಬ ಶಿಲೀಂಧ್ರವು (Fungi) ಜಿಡ್ಡನ್ನು ತಿಂದು ಬದುಕುತ್ತದೆ. ಪ್ರತಿದಿನ ಎಣ್ಣೆ ಹಚ್ಚುವುದರಿಂದ ಈ ಶಿಲೀಂಧ್ರಕ್ಕೆ ಅತಿಯಾದ ಪೋಷಣೆ ಸಿಗುತ್ತದೆ. ಪರಿಣಾಮವಾಗಿ ಹೊಟ್ಟು ಮತ್ತು ತಲೆ ತುರಿಕೆ ತೀವ್ರಗೊಳ್ಳುತ್ತದೆ.
ಕೂದಲು ಉದುರುವಿಕೆ:
ತಲೆಯ ರಂಧ್ರಗಳು ಕೊಳೆ ಮತ್ತು ಎಣ್ಣೆಯಿಂದ ಮುಚ್ಚಿಹೋದಾಗ, ಕೂದಲಿನ ಬೇರುಗಳಿಗೆ ಆಮ್ಲಜನಕ ಸಿಗುವುದಿಲ್ಲ. ಇದರಿಂದ ಬೇರುಗಳು ದುರ್ಬಲಗೊಂಡು ಕೂದಲು ತಾನಾಗಿಯೇ ಉದುರಲು ಶುರುವಾಗುತ್ತದೆ.
ಇದನ್ನೂ ಓದಿ:
ಮುಖದ ಮೇಲೆ ಮೊಡವೆಗಳು:
ತಲೆಯಲ್ಲಿರುವ ಅತಿಯಾದ ಎಣ್ಣೆಯು ಹಣೆ ಮತ್ತು ಕೆನ್ನೆಯ ಭಾಗಕ್ಕೆ ಹರಡಿದಾಗ, ಮುಖದ ಮೇಲೂ ಸಣ್ಣ ಸಣ್ಣ ಮೊಡವೆಗಳು ಅಥವಾ ಗುಳ್ಳೆಗಳು ಏಳುತ್ತವೆ.
ಕೂದಲಿಗೆ ಎಣ್ಣೆ ಹಚ್ಚಲು ಸರಿಯಾದ ಕ್ರಮ:
ವಾರದಲ್ಲಿ ಕೇವಲ ಎರಡರಿಂದ ಮೂರು ಬಾರಿ ಎಣ್ಣೆ ಹಚ್ಚುವುದು ಕೂದಲಿನ ಆರೋಗ್ಯಕ್ಕೆ ಧನಾತ್ಮಕ ಫಲಿತಾಂಶ ನೀಡುತ್ತದೆ.
ಎಣ್ಣೆಯನ್ನು ದಿನಗಟ್ಟಲೆ ತಲೆಯಲ್ಲೇ ಬಿಡಬಾರದು. ಸ್ನಾನ ಮಾಡುವ 1-2 ಗಂಟೆಗಳ ಮುಂಚೆ ಉಗುರುಬೆಚ್ಚಗಿನ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ, ನಂತರ ಮೈಲ್ಡ್ ಶಾಂಪೂ ಬಳಸಿ ತೊಳೆಯಬೇಕು.
ಎಣ್ಣೆ ಹಚ್ಚುವಾಗ ಉಗುರುಗಳಿಂದ ಜೋರಾಗಿ ಉಜ್ಜಬಾರದು. ಕೇವಲ ಬೆರಳಿನ ತುದಿಗಳಿಂದ ವೃತ್ತಾಕಾರದಲ್ಲಿ ನಿಧಾನವಾಗಿ ಮಸಾಜ್ ಮಾಡಬೇಕು.



