ಪ್ರಧಾನಿ ಮೋದಿ ಜೊತೆ ಕಷ್ಟ-ಸುಖ ಹಂಚಿಕೊಂಡ ಸುಡಾನ್‌ನಿಂದ ರಕ್ಷಿಸಲ್ಪಟ್ಟ ಹಕ್ಕಿಪಿಕ್ಕಿ ಸಮುದಾಯದ ಜನರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಿವಮೊಗ್ಗದ ಆಯನೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಧಾನಿ ಮೋದಿ ಅವರು ಸುಡಾನ್‌ನಿಂದ ರಕ್ಷಿಸಲ್ಪಟ್ಟ ಮಲೆನಾಡು ಭಾಗದ ಹಕ್ಕಿಪಿಕ್ಕಿ ಜನಾಂಗದ ಜನರೊಂದಿಗೆ ಸಂವಾದ ನಡೆಸಿದರು.

ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ (Sudan Violence) ಸಿಲುಕಿಕೊಂಡು ಬಳಿಕ ಕೇಂದ್ರಸರ್ಕಾರ ನಡೆಸಿದ ಆಪರೇಷನ್‌ ಕಾವೇರಿ (Operation cauvery) ಕಾರ್ಯಾಚರಣೆಯಿಂದಾಗಿ ರಕ್ಷಿಸಲ್ಪಟ್ಟ ಮಲೆನಾಡು ಭಾಗದ ಹಕ್ಕಿಪಿಕ್ಕಿ ಜನಾಂಗದ (Hakkipikki community) ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಧನ್ಯವಾದ ಹೇಳಿದರು.

ಶಿವಮೊಗ್ಗ, ದಾವಣಗೆರೆ ಜಿಲ್ಲೆಯ 40ಕ್ಕೂ ಹೆಚ್ಚು ಅದಿವಾಸಿ ಬುಡಕಟ್ಟು ಸಮುದಾಯವರಾದ ಹಕ್ಕಿಪಿಕ್ಕಿ ಜನಾಂಗದವರು ವಿಮಾನ ನಿಲ್ದಾಣದಲ್ಲಿ ಮೋದಿ ಅವರಿಗಾಗಿ ಕಾದು ಕುಳಿತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ಭೇಟಿ ಮಾಡಿ ಕುಶಲೋಕಪರಿ ವಿಚಾರಿಸಿದರು.

ಎಷ್ಟು ವರ್ಷದಿಂದ ಸುಡಾನ್‌ಗೆ ಹೋಗುತ್ತಿದ್ದೀರಿ, ಅಲ್ಲಿ ಹೇಗೆ ವಾಸಿಸುತ್ತೀರಿ, ಆವತ್ತು ಏನಾಯಿತು ಎಂದೆಲ್ಲ ಪ್ರಶ್ನೆಗಳನ್ನು ಕೇಳಿದ ಪ್ರಧಾನಿಯವರು ಉತ್ತರಗಳನ್ನು ಪಡೆದುಕೊಂಡರು.

ಈ ವೇಳೆ ಮಾತನಾಡಿದ ಓರ್ವ, ಆವತ್ತು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಾಗಲೂ ನಮ್ಮನ್ನು ಭಾರತ ಸರ್ಕಾರ ರಕ್ಷಣೆ ಮಾಡುತ್ತದೆ, ಡಬಲ್‌ ಎಂಜಿನ್‌ ಸರ್ಕಾರ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ ತಮಗಿತ್ತು ಎಂದು ಖುಷಿ ಹಂಚಿಕೊಂಡರು.

ಈ ವೇಳೆ ಭರವಸೆ ನೀಡಿದ ಪ್ರಧಾನಿ ಮೋದಿ, ಜಗತ್ತಿನ ಯಾವುದೇ ಭಾಗದಲ್ಲಾದರೂ ಸರಿ, ಭಾರತೀಯರು ಸಂಕಷ್ಟದಲ್ಲಿದ್ದರೆ ಅವರ ರಕ್ಷಣೆಗೆ ಸರ್ಕಾರ ಕಟಿಬದ್ಧವಾಗಿರುತ್ತದೆ ಎಂದು ಅವರು ಹೇಳಿದರು.

ಹಕ್ಕಿಪಿಕ್ಕಿ ಜನಾಂಗದ ಸಾಹಿತಿಯಾಗಿರುವ ಕುಮುದ ಅವರ ಪುತ್ರಿ ರಾಜೇಶ್ವರಿ ಅವರು ʻಹಕ್ಕಿಪಿಕ್ಕಿಯರ ಇತಿಹಾಸ – ಹುಡುಕಾಟ ಮತ್ತು ಮಂಡನೆʼ ಎಂಬ ಪುಸ್ತಕವನ್ನು ಉಡುಗೊರೆಯಾಗಿ ಮೋದಿಯವರಿಗೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!