ಹಾನಗಲ್ ಗ್ಯಾಂಗ್ ರೇಪ್: ವಿಶೇಷ ತನಿಖಾ ತಂಡ ರಚಿಸಲು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಆಗ್ರಹ

 ಹೊಸದಿಗಂತ ವರದಿ, ಹಾವೇರಿ:

ಹಾನಗಲ್ಲಿನ ನಾಲ್ಕರ ಕ್ರಾಸ್‌ನಲ್ಲಿ ನಡೆದ ಗ್ಯಾಂಪ್ ರೇಪ್ ಘಟನೆಯ ಸಮಗ್ರ ತನಿಖೆಗೆ ಎಸ್‌ಐಟಿ ಮಾದರಿಯಲ್ಲಿ ಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆರೋಪಿತರಿಗೆ ೧ ವರ್ಷದಲ್ಲಿ ಶಿಕ್ಷೆಯಾಗುವಂತೆ ಮಾಡುವ ಜವಾಬ್ದಾರಿ ಪೊಲೀಸರ ಮೇಲಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.

ಭಾನುವಾರ ಘಟನೆಗೆ ಸಂಬಂದಿಸಿದ ಎಲ್ಲ ಸ್ಥಳಗಳಿಗೆ ಭೇಟಿ ನೀಡಿದ್ದು, ಸಂತ್ರಸ್ಥೆಯನ್ನು ಭೇಟಿ ಮಾಡಲಾಗಲಿಲ್ಲ, ಆದರೆ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಅವಳ ಯೋಗಕ್ಷೇಮ ವಿಚಾರಿಸಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದಿಡೀರ್ ಎಂದು ರಾತ್ರೋರಾತ್ರಿ ಸಂತ್ರಸ್ಥೆಯನ್ನು ಸಾಂತ್ವನ ಕೇಂದ್ರದಿಂದ ಅವಳ ಮನೆಗೆ ಕಳುಹಿಸಿಕೊಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂದು ಅಥವಾ ನಾಳೆಯೊಳಗೆ ಅವಳನ್ನು ಪುನಃ ಕರೆಸಿ ಯೋಗಕ್ಷೇಮ ಕೇಂದ್ರದಲ್ಲಿರಿಸಿ, ಸೂಕ್ತ ಚಿಕಿತ್ಸೆ ಕೊಡಿಸಿ, ಶಾಕ್‌ನಲ್ಲಿರುವ ಮಹಿಳೆಗೆ ಧೈರ್ಯ ತುಂಬುವ ಕೆಲಸ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

ಈ ಘಟನೆ ಕುರಿತು ಬೇಗನೇ ದೋಷಾರೋಪಣೆ ಪಟ್ಟಿ ಸಲ್ಲಿಸಿ ೧ವರ್ಷದೊಳಗಾಗಿ ಕೋರ್ಟ್‌ನಲ್ಲಿನ ವಿಚಾರಣೆ ಮುಗಿಸಿ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಈ ಶಿಕ್ಷೆ ರಾಜ್ಯದಲ್ಲಿನ ಕಾನೂನು ಭಂಜಕರಿಗೆ, ಇಂಥ ಕೃತ್ಯ ಮಾಡುವ ವ್ಯಕ್ತಿಗಳಿಗೆ ಭಯ ಮೂಡುವಂತಿರಲಿ, ಅಂಥ ಮಾದರಿ ಕೆಲಸ ಮಾಡಿ ಎಂದು ಪೊಲೀಸರಿಗೆ ಸಲಹೆ ನೀಡಿದ್ದೇನೆ. ಏಳು ಜನರಿಂದ ಅತ್ಯಾಚಾರ ಘಟನೆ ಅಮಾನವೀಯ ಮತ್ತು ಘೊರವಾದುದು. ಇವರಿಗೆ ಬೇಲ್ ಸಿಗಲೇಬಾರದು, ಸಿಕ್ಕಲ್ಲಿ ಅವರ ಮೇಲೆ ರೌಡಿಶೀಟರ್ ತೆರೆದು, ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸುಂತಾಗಲಿ. ಒಂದು ವೇಳೆ ಹೊರಬಂದಲ್ಲಿ, ಅವರನ್ನು ಗಡಿಪಾರು ಶಿಕ್ಷೆಗೆ ಗುರಿಪಡಿಸಬೇಕು. ಇದರಿಂದ ಸಂತ್ರಸ್ಥೆಗೆ ಭದ್ರತೆ ಹಾಗೂ ಪೊಲೀಸರ ಮೇಲೆ ಸಮಾಜಕ್ಕೆ ವಿಶ್ವಾಸ ಮೂಡಲು ಸಾಧ್ಯವಿದೆ ಎಂದರು.

ಇನ್ನು ಸಂತ್ರಸ್ಥೆಗೆ ಉದ್ಯೋಗ ಇಲ್ಲವೇ ಬೇರೆ ಏನು ಬೇಕು ಎಂದಾಗ ಮನೆ ಬೇಕೆಂದು ಕೇಳಿದ್ದಾಳೆ, ಈ ಕುರಿತು ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸಿ ಅಗತು ಶಿಫಾರಸು ಮಾಡಲಾಗುವುದು. ಇನ್ನು ಸಂತ್ರಸ್ಥೆ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಕರೆ ಬರುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಂಥ ದೂರುಗಳು ಬಂದಿಲ್ಲ, ಅವರಿಗೆ ಮತ್ತು ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಸೂಚಿಸಲಾಗಿದೆ ಎಂದರು.

ಇನ್ನು ೩೭೬(ಡಿ) ಅತ್ಯಾಚಾರ ಪ್ರಕರಣದ ಅಡಿಯಲ್ಲಿ ದೂರು ದಾಖಲಾದರೆ ಮೂರು ದಿನಗಳಲ್ಲಿ ಎಸ್‌ಐಟಿ ಮಾಡಿ ತನಿಖೆ ನಡೆಸುವಂತೆ ಸುಪ್ರೀಂ ನಿರ್ದೇಶನ ಇದ್ದಾಗಲೂ ಎಸ್‌ಐಟಿ ಮಾಡಿಲ್ಲ. ಘಟನೆ ನಡೆದು ೫ದಿನಗಳೆ ಕಳೇದರೂ ಸರ್ಕಾರ ಅಥವಾ ಸಚಿವರಾಗಲಿ ಸಂತ್ರಸ್ಥೆಗೆ ಸಾಂತ್ವನ ಅಥವಾ ಧೈರ್ಯ ಹೇಳಲು ಬಂದಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣದಲ್ಲಿ ಸರಿಯಾದ ತನಿಖೆಯಲ್ಲಿ ಇಲ್ಲಿಯ ಪೊಲೀಸರು ಮಾಡದೇ ಹೋದಲ್ಲಿ ದೋಷಾರೋಪಣೆ ಪಟ್ಟಿಯಲ್ಲಿ ಅವರನ್ನೇ ಪಾರ್ಟಿ ಮಾಡಬೇಕಾಗುತ್ತದೆ ಎಂದಷ್ಟೇ ಹೇಳಿ ಜಾರಿಕೊಂಡರು.
ಈ ವೇಳೆ ನಿಗಮದ ವಿಶೇಷಾಧಿಕಾರಿ ಮುಜೀಬುಲ್ಲಾ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!