ಹಸ್ತದ ಒಳಗೆ ಹಸ್ತದ ಆಪರೇಷನ್: ನಳಿನ್ ಕುಮಾರ್ ಕಟೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಯಾವುದೇ ಕಾರಣಕ್ಕೆ ಬಿಜೆಪಿಯಿಂದ ಯಾರೂ ಕಾಂಗ್ರೆಸ್‌ಗೆ ಹೋಗುತ್ತಿಲ್ಲ. ಬೆಳಗಾವಿ ಅಧಿವೇಶನ ಮುಗಿದ ಕೂಡಲೇ ಕಾಂಗ್ರೆಸ್‌ನಲ್ಲಿ ದೊಡ್ಡ ಪರಿವರ್ತನೆ ಆಗುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.

ಮಂಗಳೂರು ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನ ಆಂತರಿಕ ಜಗಳದ ನಡುವೆಯೇ ಮರಿಖರ್ಗೆ ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಡುತ್ತಿದ್ದಾರೆ. ಕಾಂಗ್ರೆಸ್ ಒಡೆಯುತ್ತಿದ್ದು, ಹಸ್ತದ ಒಳಗೆ ಹಸ್ತದ ಆಪರೇಷನ್ ಆಗುತ್ತಿದೆ. ಈ ಭಯದಿಂದ ಕಾಂಗ್ರೆಸ್‌ನವರು ಬಿಜೆಪಿಯಿಂದ ಬರ್ತಾರೆ ಎಂದು ದಾರಿ ತಪ್ಪಿಸುತ್ತಾ ಇದ್ದಾರೆ ಎಂದರು.

ಮುಖ್ಯಮಂತ್ರಿ ಹುದ್ದೆಗೆ ಹತ್ತಾರು ಟವಲ್‌ಗಳು ಬಿದ್ದಿವೆ. ಸತೀಶ್ ಜಾರಕಿಹೊಳಿ, ಪರಮೇಶ್ವರ್ ಜತೆಗೆ ದಲಿತ ಸಿಎಂ ಕಾರ್ಡ್ ಹೊರಟಿದೆ. ಪ್ರಿಯಾಂಕ್ ಖರ್ಗೆ, ಡಿಕೆಶಿ ಎಲ್ಲರೂ ಹೊರಟ ಕಾರಣ ಸರ್ಕಾರ ಬೀಳಬಹುದು. ಸರ್ಕಾರ ಟೇಕಾಫ್ ಆಗುತ್ತಿಲ್ಲ. ಅಭಿವೃದ್ಧಿ ಕಾರ್ಯ ಕೂಡ ಆಗುತ್ತಿಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ, ನಾಲ್ಕು ತಿಂಗಳಲ್ಲಿ ಮುನ್ನೂರು ರೈತರ ಆತ್ಮಹತ್ಯೆ ಆಗಿದೆ. ಉಡುಪಿಯಲ್ಲಿ ಹಾಡಹಗಲೇ ನಾಲ್ವರ ಹತ್ಯೆನಡೆದಿದೆ. ಶಾಂತಿ ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಬರ ನಿಯಂತ್ರಣ ಆಗಿಲ್ಲ. ರಾಜ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಹೇಳಿ ತಲವಾರು ತೋರಿಸಿದರೂ ಬಂಧನ ಆಗುತ್ತಿಲ್ಲ. ರಾಷ್ಟ್ರ ವಿರೋಧಿ ಶಕ್ತಿಗಳು ರಾಜ್ಯದಲ್ಲಿ ಎದ್ದು ನಿಂತಿದೆ ಎಂದರು.

ಮೋದಿ ಸರ್ಕಾರ ನೀಡಿದ ಅನುದಾನದಲ್ಲಿ ರಾಜ್ಯದಲ್ಲಿ ಕೆಲಸ ನಡೆಯುತ್ತಿದೆ. ರಾಜ್ಯದಿಂದ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ಈ ಸರ್ಕಾರ ಭ್ರಷ್ಟಾಚಾರದ ಸರ್ಕಾರ. ಅಧಿಕಾರಿಗಳ ಸಂಬಳ ನೀಡಲೂ ಕೂಡ ಹಣ ಇಲ್ಲ, ಮೂರ್ನಾಲ್ಕು ತಿಂಗಳು ಕಾದು ನೋಡಿ, ಎಲ್ಲವೂ ಗೊತ್ತಾಗಲಿದೆ ಎಂದು ನಳಿನ್ ಕುಮಾರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!