ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ ಮಾಡಿದ್ದು ಯಾರೇ ಆಗಲಿ ಮುಲಾಜು ನೋಡಬೇಡಿ, ಗಲ್ಲಿಗೆ ಹಾಕಿ ಬೇಕಾದ್ದು ಮಾಡಿ ಎಂದು ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ ಆರೋಪಿಯ ಅತ್ತೆ ಹೇಳಿಕೆ ನೀಡಿದ್ದಾರೆ.
ಆರೋಪಿ ಸಂಜಯ್ ರಾಯ್‍ನ ಅತ್ತೆ ದುರ್ಗಾ ದೇವಿ ಮಾಧ್ಯಮಗಳ ಮುಂದೆ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ಆರೋಪಿ ಸಂಜಯ್ ಒಬ್ಬನೇ ಕೃತ್ಯ ಎಸಗಿದಂತೆ ಕಾಣುತ್ತಿಲ್ಲ. ಈ ಕೃತ್ಯದಲ್ಲಿ ಅವನ ಜೊತೆ ಬೇರೆಯವರು ಇದ್ದಿರಬಹುದು. ಒಬ್ಬನನ್ನೂ ಬಿಡಬೇಡಿ, ಆ ಹೆಣ್ಮಗು ಹೇಗೆ ನರಳಿ ಸತ್ತಳೋ ಅದೇ ರೀತಿ ಇವರೂ ಸಾಯಲಿ ಎಂದಿದ್ದಾರೆ.
ಆರೋಪಿ ಸಂಜಯ್ ತನ್ನ ಪತ್ನಿಗೂ ಹಿಂಸೆ ಕೊಡುತ್ತಿದ್ದ. ನನ್ನ ಮಗಳ ಜೊತೆ ಮದುವೆ ಬಳಿಕ ಆರಂಭದಲ್ಲಿ 6 ತಿಂಗಳು ಮಾತ್ರ ಆತ ಚೆನ್ನಾಗಿದ್ದ. ಬಳಿಕ ಆಕೆಗೆ ಥಳಿಸುತ್ತಿದ್ದ. ಇದರಿಂದ ಆಕೆ 3 ತಿಂಗಳ ಗರ್ಭಿಣಿಯಾಗಿದ್ದಾಗ ಆಕೆಗೆ ಗರ್ಭಪಾತವಾಗಿತ್ತು. ಈ ಬಗ್ಗೆ ದೂರು ಸಹ ದಾಖಲಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದಾದ ಬಳಿಕ ನನ್ನ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಳು. ಅವಳ ಚಿಕಿತ್ಸೆಯ ಎಲ್ಲಾ ಖರ್ಚುನ್ನು ನಾನು ಭರಿಸಿದ್ದೇನೆ ಎಂದಿದ್ದಾರೆ. ಸಂಜಯ್ ಒಳ್ಳೆಯವನಲ್ಲ. ಅವನನ್ನು ಗಲ್ಲಿಗೇರಿಸಿ, ಅವನಿಗೆ ನೀವು ಬೇಕಾದುದನ್ನು ಮಾಡಿ. ಆದರೆ ಆತ ಒಬ್ಬನಿಂದಲೇ ಇದು ನಡೆದಿಲ್ಲ ಎಂದು ಅವರು ಹೇಳಿದ್ದಾರೆ.