November 18, 2026
Wednesday, November 18, 2026
spot_img

ಮತ್ತೆ ಪ್ರಕೃತಿ ವಿಕೋಪದ ಆತಂಕ: ಕರಾವಳಿ ತೀರದ ಜನರ ನಿದ್ದೆಗೆಡಿಸಿದ ‘ಅಕ್ವಾನ್’ ಚಂಡಮಾರುತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ‘ಅಕ್ವಾನ್’ ಚಂಡಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೇ ಶುಕ್ರವಾರ (ನ. 20) ಮಧ್ಯಾಹ್ನ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯ ಮಚಲಿಪಟ್ಟಣಂ ಹಾಗೂ ಪುರಿ ನಡುವೆ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ವೇಗ ಹೆಚ್ಚಿಸಿಕೊಂಡ ಚಂಡಮಾರುತ

ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಈ ಚಂಡಮಾರುತವು ಕಳೆದ ಆರು ಗಂಟೆಗಳಲ್ಲಿ ಗಂಟೆಗೆ 7 ಕಿ.ಮೀ ವೇಗವನ್ನು ಪಡೆದುಕೊಂಡಿದೆ. ಪ್ರಸ್ತುತ ವಿಶಾಖಪಟ್ಟಣದಿಂದ 580 ಕಿ.ಮೀ, ಮಚಲಿಪಟ್ಟಣಂನಿಂದ 590 ಕಿ.ಮೀ ಮತ್ತು ಒಡಿಶಾದ ಗೋಪಾಲಪುರದಿಂದ 710 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಮಂಗಳವಾರ ರಾತ್ರಿಯವರೆಗೆ ಕೇವಲ 3 ಕಿ.ಮೀ ವೇಗದಲ್ಲಿದ್ದ ಈ ಚಂಡಮಾರುತವು, ಈಗ ತನ್ನ ಪಥವನ್ನು ಕೊಂಚ ಬದಲಿಸಿಕೊಂಡು ವಿಶಾಖಪಟ್ಟಣಂ ಮತ್ತು ನೆಲ್ಲೂರು ನಡುವಿನ ಕರಾವಳಿಯತ್ತ ಮುನ್ನುಗ್ಗುತ್ತಿದೆ.

ಬಿರುಗಾಳಿಯ ಮುನ್ಸೂಚನೆ

ಚಂಡಮಾರುತದ ಪರಿಣಾಮವಾಗಿ ಇಂದು ಸಂಜೆಯಿಂದಲೇ ಕರಾವಳಿ ತೀರದಲ್ಲಿ ಗಂಟೆಗೆ 100 ರಿಂದ 110 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ಉತ್ತರ ಜಿಲ್ಲೆಗಳಾದ ವಿಶಾಖಪಟ್ಟಣಂ, ಅಲ್ಲೂರಿ ಸೀತಾರಾಮ ರಾಜು, ಪಾರ್ವತಿಪುರಂ ಮನ್ಯಂ, ಶ್ರೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಒಂದೇ ತಿಂಗಳಲ್ಲಿ ಮೂರನೇ ಚಂಡಮಾರುತ

ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕರು ಈ ಕುರಿತು ಪ್ರತಿಕ್ರಿಯಿಸಿದ್ದು, “ಆಂಧ್ರಪ್ರದೇಶವು ಅತ್ಯಂತ ಅಪರೂಪದ ಹವಾಮಾನ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಒಂದೇ ತಿಂಗಳ ಅವಧಿಯಲ್ಲಿ ಮೂರು ಉಷ್ಣವಲಯದ ಚಂಡಮಾರುತಗಳು ಒಂದೇ ರಾಜ್ಯದ ಕರಾವಳಿಯನ್ನು ದಾಟುವುದು ತೀರಾ ವಿರಳ” ಎಂದು ಹೇಳಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಭಾಗದ ಜನರು ಸುರಕ್ಷಿತವಾಗಿರುವಂತೆ ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ.

Must Read

Skip to toolbar