ಹೊಸದಿಗಂತ ವರದಿ ಹುಬ್ಬಳ್ಳಿ:
ಪ್ರತಿವರ್ಷದಂತೆ ಈ ವರ್ಷವೂ ಆಗಸ್ಟ್ 12ರಂದು ನಗರದಲ್ಲಿ ಹರ್ ಘರ್ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಮ್ ಭಾರತಿ ಸಂಸ್ಥೆ ಅಧ್ಯಕ್ಷ ಅನ್ವರ್ ಮುಲ್ಲಾ ತಿಳಿಸಿದ್ದಾರೆ.
ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಮ್ ಭಾರತಿಯ ಸಂಸ್ಥೆ, ಚಿನ್ಮಯ ಶಿಕ್ಷಣ ಸಂಸ್ಥೆ ಹಾಗೂ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಪ್ರತಿಷ್ಠಾನ ಸಹಯೋಗದಲ್ಲಿ ಹರ್ ಘರ್ ತಿರಂಗ ಯಾತ್ರೆಯನ್ನು ಆ. 12 ರಂದು ಬೆಳಿಗ್ಗೆ 10 ಗಂಟೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
150 ಅಡಿ ಉದ್ದದ ರಾಷ್ಟ್ರ ಧ್ವಜದೊಂದಿಗೆ ತಿರಂಗ ಯಾತ್ರೆ ಇಲ್ಲಿಯ ಚಿನ್ಮಯ ಮಹಾವಿದ್ಯಾಲಯದ ಆವರಣದಿಂದ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡು ಬೃಹತ್ ರಾಷ್ಟ್ರ ಧ್ವಜ ಪ್ರದರ್ಶಿಸಿ ರಾಷ್ಟ್ರಗೀತೆ ಹಾಡುವ ಮೂಲಕ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಯಾತ್ರೆಯಲ್ಲಿ ನಗರದ ಸ್ವರನಾದ ಡೋಲ್, ತಾಶಾ ಪಥಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಲಾವಿದರು ಸೇರಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳುವರು. ಅದಲ್ಲದೆ ಸ್ವಾತಂತ್ರ್ಯೋತ್ಸವದ ನಿಮಿತ್ತ ಆ.10 ರಂದು ಚಿನ್ಮಯ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ದೇಶಭಕ್ತಿ ಗೀತೆಗಳ ಸ್ಪರ್ಧೆ, ಮಹಾನ್ ಪುರುಷರ ಏಕಪಾತ್ರಾಭಿನಯ, ರಂಗೋಲಿ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಈ ವೇಳೆ ಸಂಸ್ಥೆಯು ಜಿಲ್ಲಾಡಳಿತಕ್ಕೆ ಕೆಲವು ಮನವಿಯನ್ನು ಮಾಡಿಕೊಂಡಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 15 ದಿನಗಳ ಮುಂಚೆಯೇ ಸ್ವಾತಂತ್ರ್ಯ ವೀರರ ಸ್ಮಾರಕ, ಪುತ್ಥಳಿ ಹಾಗೂ ಹುತಾತ್ಮರ ಸ್ಥೂಪಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಬೇಕು. ಅಲ್ಲದೆ ಧ್ವಜಾರೋಹಣ ಕುರಿತ ಮಾಹಿತಿಯನ್ನು ವಿಡಿಯೋ ಮೂಲಕ ಶಾಲೆ, ಕಾಲೇಜುಗಳಲ್ಲಿ ಪ್ರಸಾರ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಚಿನ್ಮಯ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ವಿಶ್ವನಾಥ ರಾನಡೆ, ಪ್ರಾಚಾರ್ಯ ವಿನಾಯಕ ಬಿ.ಕೆ., ಅಶೋಕ ತೆಲೆಗಾರ, ರಾಘವೇಂದ್ರ ಮುತಾಲಿಕ ದೇಸಾಯಿ ಇತರರು ಇದ್ದರು.