November 23, 2026
Monday, November 23, 2026
spot_img

ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟ: ಬಿಸ್ಲೆರಿ ಸೇರಿ 5 ಆಹಾರ ಕಂಪನಿಗಳಿಗೆ FSSAI ಶಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗ್ರಾಹಕರ ಆರೋಗ್ಯಕ್ಕೆ ಹಾನಿಕಾರಕ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಪೂರೈಸಿದ ಆರೋಪದ ಮೇಲೆ ಪ್ರಸಿದ್ಧ ಬಿಸ್ಲೆರಿ ಇಂಟರ್‌ನ್ಯಾಷನಲ್ ಸೇರಿದಂತೆ ಐದು ಆಹಾರ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅನುಮತಿ ನೀಡಿದೆ. ಇದೇ ವೇಳೆ, ನೈರ್ಮಲ್ಯ ನಿಯಮಗಳನ್ನು ಉಲ್ಲಂಘಿಸಿದ ಎರಡು ಸಂಸ್ಥೆಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.

ಬಿಸ್ಲೆರಿ ನೀರಿನಲ್ಲಿ ಅಪಾಯಕಾರಿ ಅಂಶ ಪತ್ತೆ

ಬಿಸ್ಲೆರಿ ಕಂಪನಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷಿಸಿದಾಗ, ಅದರಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಬ್ರೋಮೇಟ್ ಇರುವುದು ಕಂಡುಬಂದಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಈ ನೀರು ಕುಡಿಯಲು ಅಸುರಕ್ಷಿತ ಎಂದು ಘೋಷಿಸಲಾಗಿದೆ. ಅಲ್ಲದೆ, ರೆಫರಲ್ ಫುಡ್ ಲ್ಯಾಬೊರೇಟರಿ ನಡೆಸಿದ ಪರೀಕ್ಷೆಯಲ್ಲೂ ಈ ನೀರಿನಲ್ಲಿ ‘ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಅಂಶ ಪತ್ತೆಯಾಗಿದ್ದು, ಅಸುರಕ್ಷಿತ ಎಂದು ವರದಿ ನೀಡಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಬಿಸ್ಲೆರಿ ಸಂಸ್ಥೆಯನ್ನು ಸಂಪರ್ಕಿಸಲಾಗಿದ್ದರೂ, ಯಾವುದೇ ಉತ್ತರ ಲಭ್ಯವಾಗಿಲ್ಲ.

ಕಾನೂನು ಕ್ರಮಕ್ಕೆ ಒಳಗಾದ ಇತರ 4 ಕಂಪನಿಗಳು

ವಸಂತ್ ಮಸಾಲಾ ಕಂಪನಿಯ ಮೆಣಸಿನ ಪುಡಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ‘ಡಿಫೆನೊಕೊನಜೋಲ್’ ಎಂಬ ಕೀಟನಾಶಕದ ಅಂಶ ಪತ್ತೆಯಾಗಿದೆ.

ಟಿಟ್-ಬಿಟ್ ಫುಡ್ಸ್ಇವರ ಪ್ಯಾಕ್ ಮಾಡಿದ ಮೆಣಸಿನ ಪುಡಿಯಲ್ಲಿ ಹೆಚ್ಚುವರಿ ಕೀಟನಾಶಕ ಅಂಶ ಹಾಗೂ ಅರಿಶಿನ ಪುಡಿಯಲ್ಲಿ ಅನುಮತಿಸಲಾದ ಮಿತಿಗಿಂತ ಹೆಚ್ಚಿನ ಪ್ರಮಾಣದ ತವರದ ಅಂಶ ಕಂಡುಬಂದಿದೆ.

ಮಿಮಾಂಸ ಇಂಡಸ್ಟ್ರೀಸ್ಸಂಸ್ಥೆಯ ವಾಲ್‌ನಟ್ ತಿರುಳು ಕಳಪೆ ಗುಣಮಟ್ಟದ್ದಾಗಿದ್ದು, ಸೇವನೆಗೆ ಅಸುರಕ್ಷಿತವಾಗಿದೆ ಎಂದು ದೃಢಪಟ್ಟಿದೆ.

ಆಶಾ ಕನ್ಫೆಕ್ಷನರಿಇವರ ಚಾಕೊಲೇಟ್ ತುಂಬಿದ ಕುಕೀಸ್‌ಗಳಲ್ಲಿ ಸಕ್ಕರೆಯ ಪ್ರಮಾಣದ ಕುರಿತು ತಪ್ಪು ಮಾಹಿತಿ ನೀಡಲಾಗಿದ್ದು, ಇವು ಕಳಪೆ ಮತ್ತು ಅಸುರಕ್ಷಿತ ಎಂದು ಕಂಡುಬಂದಿದೆ.

ಪರವಾನಗಿ ಅಮಾನತು

ಇದಲ್ಲದೆ, ಕಳಪೆ ನೈರ್ಮಲ್ಯ ಮತ್ತು ನಿಯಮಬಾಹಿರ ಮರು-ಪ್ಯಾಕಿಂಗ್ ಕಾರಣಗಳಿಗಾಗಿ ಕ್ರಮವಾಗಿ ‘ಊರ್ಮಿ ಲೈಫ್‌ಸೈನ್ಸಸ್ ಎಲ್‌ಎಲ್‌ಪಿ’ ಮತ್ತು ‘ಗೌರ್ ಆಯುರ್ವೇದಿಕ್ ಸ್ಟೋರ್’ ಪರವಾನಗಿಗಳನ್ನು ಎಫ್‌ಎಸ್‌ಎಸ್‌ಎಐ ಅಮಾನತುಗೊಳಿಸಿದೆ.

Must Read

Skip to toolbar