November 23, 2026
Monday, November 23, 2026
spot_img

ತಿಲಕ್ ಅಜೇಯ ಶತಕ ವ್ಯರ್ಥ: ಪಾಕ್ ಎ ಎದುರು ಭಾರತ ಎ ತಂಡಕ್ಕೆ 48 ರನ್‌ಗಳ ಸೋಲಿನ ಬರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಭಾನುವಾರದ ಮಹತ್ವದ ಪಂದ್ಯದಲ್ಲಿ ಭಾರತ ಎ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ವಿರುದ್ಧ 48 ರನ್‌ಗಳಿಂದ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಎ ತಂಡ 49.2 ಓವರ್‌ಗಳಲ್ಲಿ 313 ರನ್ ಗಳಿಸಿದರೆ, ಈ ಕಠಿಣ ಗುರಿ ಬೆನ್ನಟ್ಟಿದ ಭಾರತ ಎ ತಂಡ 265 ರನ್‌ಗಳಿಗೆ ಸರ್ವಪತನ ಕಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಎ ತಂಡಕ್ಕೆ ಆರಂಭಿಕರಾದ ಶಮೀಮ್ ಹುಸೇನ್ (33 ರನ್) ಮತ್ತು ಮಾಜ್ ಸದಾಕತ್ (59 ರನ್) ಕೇವಲ 7.5 ಓವರ್‌ಗಳಲ್ಲಿ 66 ರನ್ ಸೇರಿಸಿ ಭದ್ರ ಬುನಾದಿ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಹಸನ್ ನವಾಜ್ 79 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರೆ, ನಾಯಕ ಅಬ್ದುಲ್ ಸಮದ್ 28 ರನ್ ಕೊಡುಗೆ ನೀಡಿದರು. ಅಂತಿಮ ಹಂತದಲ್ಲಿ ಫರ್ಹಾನ್ ಯೂಸುಫ್ (56 ರನ್) ಮತ್ತು ಮೊಹಮ್ಮದ್ ಇಮ್ರಾನ್ (23 ರನ್) ವೇಗವಾಗಿ ರನ್ ಪೇರಿಸಿ ತಂಡವನ್ನು 300ರ ಗಡಿ ದಾಟಿಸಿದರು. ಭಾರತದ ಪರ ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಸೂರ್ಯಾಂಶ್ ಶೆಡ್ಜ್ ಮತ್ತು ವಿಪ್ರಜ್ ನಿಗಮ್ ತಲಾ ಎರಡು ವಿಕೆಟ್ ಪಡೆದರೂ, ಪಾಕ್ ಬ್ಯಾಟರ್‌ಗಳ ರನ್ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

314 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಎ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ನಾಯಕ ತಿಲಕ್ ವರ್ಮಾ ಮಾತ್ರ ಛಲ ಬಿಡದೆ ಆಡಿ 149 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರು. ಆಲ್‌ರೌಂಡರ್ ಶಹಬಾಜ್ ಅಹ್ಮದ್ 49 ಎಸೆತಗಳಲ್ಲಿ 56 ರನ್ ಸಿಡಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಇತರ ಬ್ಯಾಟರ್‌ಗಳಿಂದ ಸರಿಯಾದ ಬೆಂಬಲ ಸಿಗದ ಕಾರಣ ಭಾರತ ಎ ತಂಡವು 265 ರನ್‌ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

Must Read

Skip to toolbar