November 23, 2026
Monday, November 23, 2026
spot_img

ಕರ್ನಾಟಕದ ಅಭಿವೃದ್ಧಿಗೆ ‘ಜಪಾನ್ ಟಚ್’: ಹೂಡಿಕೆ ಆಕರ್ಷಿಸಲು ಸಿಎಂ ಡಿಕೆಶಿ ವಿದೇಶಿ ಪ್ರವಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕಕ್ಕೆ ಹೆಚ್ಚಿನ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಹಾಗೂ ರಾಜ್ಯದ ನಗರಾಭಿವೃದ್ಧಿಗೆ ಹೊಸ ವೇಗ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಪಾನ್‌ಗೆ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ.

ಭಾನುವಾರ ಜಪಾನ್‌ಗೆ ತೆರಳಿದ ಮುಖ್ಯಮಂತ್ರಿಗಳನ್ನು ಜಪಾನ್‌ನಲ್ಲಿರುವ ಭಾರತದ ರಾಯಭಾರಿ ನಗ್ಮಾ ಮೊಹಮ್ಮದ್ ಮಲ್ಲಿಕ್ ಹಾಗೂ ಟೋಕಿಯೋ ಕನ್ನಡ ಸಂಘದ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡರು.

ಪ್ರವಾಸದ ಪ್ರಮುಖ ಉದ್ದೇಶಗಳು

ಈ ಪ್ರವಾಸವು ಮುಖ್ಯವಾಗಿ ಎರಡು ವಿಚಾರಗಳ ಮೇಲೆ ಕೇಂದ್ರೀಕೃತವಾಗಿದೆ. ಮೊದಲನೆಯದಾಗಿ, ಜಪಾನ್‌ನ ಪ್ರಮುಖ ಕಂಪನಿಗಳೊಂದಿಗೆ ಸಭೆ ನಡೆಸಿ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸುವುದು. ಎರಡನೆಯದಾಗಿ, ಜಪಾನ್‌ನ ವಿಶ್ವದರ್ಜೆಯ ನಗರ ಯೋಜನೆ ಮತ್ತು ಮೂಲಸೌಕರ್ಯ ವ್ಯವಸ್ಥೆಯನ್ನು ಅಧ್ಯಯನ ಮಾಡಿ, ಅದನ್ನು ನಮ್ಮ ರಾಜ್ಯದ ಭವಿಷ್ಯದ ಬೆಳವಣಿಗೆಗೆ ಅಳವಡಿಸಿಕೊಳ್ಳುವುದು. ಇದಕ್ಕಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ ಸಹಯೋಗದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ನಿಯೋಗದಲ್ಲಿ ಯಾರೆಲ್ಲಾ ಇದ್ದಾರೆ?

ಸಿಎಂ ಜೊತೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಕೂಡ ತೆರಳಿದ್ದು, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಕೈಗಾರಿಕಾ ಸಭೆಗಳ ನೇತೃತ್ವ ವಹಿಸಲಿದ್ದಾರೆ. ಇವರೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಖುಷ್ಬೂ ಗೋಯಲ್ ಚೌಧರಿ, ಸಿಎಂ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್, ಉಪ ಕಾರ್ಯದರ್ಶಿ ಯತೀಶ್ ಆರ್. ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಪ್ರವಾಸದಲ್ಲಿದೆ.

ಹೂಡಿಕೆದಾರರಿಗೆ ರಾಜ್ಯದ ಕೊಡುಗೆಗಳೇನು?

ಜಪಾನ್ ಉದ್ಯಮಿಗಳ ಮುಂದೆ ರಾಜ್ಯ ಸರ್ಕಾರದ ಹೊಸ ಕೈಗಾರಿಕಾ ನೀತಿಗಳನ್ನು ನಿಯೋಗವು ಪ್ರಸ್ತುತಪಡಿಸಲಿದೆ. ವಿಶೇಷವಾಗಿ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ, ಹಿಂದುಳಿದ ತಾಲೂಕುಗಳಲ್ಲಿ ಹೂಡಿಕೆ ಮಾಡುವವರಿಗೆ ಶೇ. 20ರವರೆಗೆ ಹೆಚ್ಚುವರಿ ಬಂಡವಾಳ ಸಬ್ಸಿಡಿ, ಕೆಐಎಡಿಬಿ ಡಿಜಿಟಲ್ ಇಂಡಸ್ಟ್ರಿಯಲ್ ಲ್ಯಾಂಡ್ ಬ್ಯಾಂಕ್ ಹಾಗೂ ಹೂಡಿಕೆ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ಅನುಮತಿ ವ್ಯವಸ್ಥೆಯ ಕುರಿತು ಹೂಡಿಕೆದಾರರಿಗೆ ಮಾಹಿತಿ ನೀಡಲಾಗುವುದು.

Must Read

Skip to toolbar