ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2026ರ 65ನೇ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಂಘಟಿತ ಪ್ರದರ್ಶನ ನೀಡಿದ ಕೆಕೆಆರ್ 4 ವಿಕೆಟ್‌ಗಳ ಅಂತರದಿಂದ ಮುಂಬೈಗೆ ಆಘಾತ ನೀಡಿತು. ಈ ಗೆಲುವಿನ ಮೂಲಕ ಕೋಲ್ಕತ್ತಾ ತಂಡವು ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸುವ ತನ್ನ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ.
ಪಂದ್ಯದ ಸೋಲಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ದೊಡ್ಡ ಶಾಕ್ ನೀಡಿದೆ. ಮೈದಾನದಲ್ಲಿ ಅಶಿಸ್ತು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಪಾಂಡ್ಯಗೆ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ. ಇದರೊಂದಿಗೆ ಅವರ ಖಾತೆಗೆ 1 ಡಿಮೆರಿಟ್ ಅಂಕವನ್ನೂ ಸೇರಿಸಲಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ನಾಲ್ಕನೇ ಎಸೆತದ ಬಳಿಕ ರನ್-ಅಪ್‌ಗೆ ಮರಳುತ್ತಿದ್ದ ಹಾರ್ದಿಕ್ ಪಾಂಡ್ಯ, ತೀವ್ರ ಹತಾಶೆಯಿಂದ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ವಿಕೆಟ್ ಬೇಲ್ಸ್‌ಗಳನ್ನು ಕೈಯಿಂದ ನೆಲಕ್ಕೆ ತಳ್ಳಿದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ ನಿಯಮ ಉಲ್ಲಂಘನೆಯಾಗಿದೆ. ಪಂದ್ಯದ ರೆಫರಿ ರಾಜೀವ್ ಸೇಠ್ ಎದುರು ಹಾರ್ದಿಕ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಬಿಸಿಸಿಐ ಹೆಚ್ಚಿನ ತನಿಖೆ ಇಲ್ಲದೆ ನೇರವಾಗಿ ದಂಡದ ಕ್ರಮ ಕೈಗೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಕೇವಲ 147 ರನ್‌ಗಳಿಗೆ ನಿಯಂತ್ರಿಸಲ್ಪಟ್ಟಿತು. ನಾಯಕನ ಆಟವಾಡಿದ ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು. ಬಳಿಕ ಬೌಲಿಂಗ್‌ನಲ್ಲಿ 2 ಓವರ್‌ಗಳಲ್ಲಿ 13 ರನ್ ನೀಡಿದರೂ ಯಾವುದೇ ವಿಕೆಟ್ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಮುಂಬೈ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ತಂಡ 6 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು.



